ಜಿಲ್ಲೆ

ಮಂಗಳೂರು ವಿ.ವಿ.ಯ ಪ್ರಭಾರ ಕುಲಪತಿ ನಡೆಗೆ ಬಿಜೆಪಿ ಖಂಡನೆ

Mangaluru - Hariprasad Rai



ಮಂಗಳೂರು : ಮಂಗಳೂರು ವಿ.ವಿ.ಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಬಗ್ಗೆ ವಿವಾದ ಎಬ್ಬಿಸಿ, ಸರ್ಕಾರಕ್ಕೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿರುವ ಮಂಗಳೂರು ವಿ.ವಿ.ಯ ಪ್ರಭಾರ ಕುಲಪತಿ ಅವರ ವರ್ತನೆ ಖಂಡನೀಯ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ .ಎಂ.ತಿಳಿಸಿದ್ದಾರೆ.
ಹಿಂದುಳಿದ ವರ್ಗ ಸಮಾಜದ ನನ್ನನ್ನು ಮೇಲ್ವರ್ಗದ ಜನ ಪ್ರತಿನಿದಿಗಳು ತುಳಿಯುತ್ತಿದ್ದಾರೆ ಎಂದು ಹೇಳುವ ಮೂಲಕ ಎಡಪಂಥೀಯ ಮಾನಸಿಕತೆಯ ಪ್ರಭಾರ ಕುಲಪತಿ ಜಾತಿಯ ವಿಷ ಬೀಜ ಬಿತ್ತಲು ಯತ್ನಿಸಿದ್ದಾರೆ. ಘಟನೆಯ ಸ್ಪೀಕರ್ ಯು.ಟಿ.ಖಾದರ್ ಅವರ ಕುಮ್ಮಕ್ಕು ಇರುವುದು ಕಂಡು ಬರುತ್ತಿದೆ . ಪ್ರಭಾರ ಕುಲಪತಿ ಅವರು ಈ ಬಾರಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರು ವಿರೋಧ ವ್ಯಕ್ತ ಪಡಿಸಿದಾಗ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾತ್ರ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿ ವಿವಾದ ಸೃಷ್ಟಿಸಿದ್ದಾರೆ. ಸಮಾಜದಲ್ಲಿ ಮತ್ತು ವಿ.ವಿ.ಯ ಆವರಣದಲ್ಲಿ ಅಶಾಂತಿಯ ನಿರ್ಮಾಣಕ್ಕೆ ಕಾರಣರಾದ ಪ್ರಭಾರ ಕುಲಪತಿಯ ಮೇಲೆ ರಾಜ್ಯಪಾಲರು ಶಿಸ್ತು ಕ್ರಮ ಜರುಗಿಸಬೇಕೆಂದು ಸುದರ್ಶನ .ಎಂ.ಆಗ್ರಹಿಸಿದ್ದಾರೆ.