ಜಿಲ್ಲೆ

ಬದುಕಿನ ಮಹಾಶಕ್ತಿ "ಮಹಿಳೆ': ಸುಧಾ ಹುಚ್ಚಣ್ಣವರ

Gadag - Shivanand Hiremath


ಗದಗ: ಶ್ರೇಷ್ಠ ಮಹಾಕವಿ ಡಾ. ಜಿ ಎಸ್​ ಶಿವರುದ್ರಪ್ಪನವರು, ತಮ್ಮ ಕಾರ್ಯ ನಿಮಿತ್ಯ, ಬೇರೆ ಊರಿಗೆ ಹೋಗಬೇಕಾಯಿತು. ಮರಳಿ ಬರುವುದು ಒಂದೆರಡು ದಿನ ತಡವಾಗಿ ಮನೆಗೆ ಬಂದಾಗ, ತಮ್ಮ ಹೆಂಡತಿ ಮಾತನಾಡದೆ ಮುನಿಸಿಕೊಂಡು, ಮೌನ ವಹಿಸಿದಾಗ ಕವಿಯಾದ ಶಿವರುದ್ರಪ್ಪನವರು
"ಸಿಟ್ಯಾಕ ನನ್ನಾಕೆ ನಾನೇನ ಮಾಡೇನಿ
ಹೊಟ್ಯಾಗಿನ ಮಾತು ಹೇಳ
ಗುಟ್ಟಾಗಿ ಉಳಿದರೆ
ಸುಟ್ಟಿತು ನನಜೀವ
ಸತ್ಯವೆಂಬುದು ಹೇಳ
ನನ್ನ ನಲ್ಲೆ ಸತ್ಯವೆಂಬುದೆ ಹೇಳ'

ಎಂದು ತಮ್ಮ ಹೆಂಡತಿ ಕುರಿತು ತಮಗಾದ ತಳಮಳವನ್ನು ಈ ಕವನದಲ್ಲಿ ವ್ಯಕ್ತಪಡಿಸಿರು. ತಮ್ಮ ಜೀವನದಲ್ಲಿ ಸತಿಗೆ ನೀಡಿದ ಭಾವನಾತ್ಮಕ ಬಂಧನ, ಮಹತ್ವವನ್ನು ಕವಿಗಳು ತಮ್ಮ ಭಾವನೆಗಳಲ್ಲಿ ವ್ಯಕ್ತಪಡಿಸಿರುವುದು ತಿಳಿಯುತ್ತದೆ. ಪ್ರತಿಯೊಬ್ಬರ ಬದುಕಿನಲ್ಲಿ ಹೆಣ್ಣು ಒಂದು ಮಹಾಶಕ್ತಿಯಾಗಿ ನಿಲ್ಲುತ್ತಾಳೆ ಎನ್ನುವುದಕ್ಕೆ ಈ ಕವನವೇ ಸಾ.
ಪ್ರತಿವರ್ಷ ಮಾರ್ಚ್​ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತೇವೆ. ಆದರೆ ವಾಸ್ತವದಲ್ಲಿ ಒಬ್ಬ ಮಹಿಳೆ ಇಂದಿಗೂ ಸಮಾಜದಲ್ಲಿ ಸಂಕೀರ್ಣತೆಗಳನ್ನು ಎದುರಿಸುತ್ತಿದ್ದಾಳೆ ಎಂಬುದು ಕಟುಸತ್ಯ. "ತೊಟ್ಟಿಲು ತೂಗುವ ಕೈ ದೇಶವನ್ನಾಳಬಲ್ಲದು' ಎಂಬ ಮಾತು ಮಹಿಳೆಯ ಗಟ್ಟಿತನ ಮತ್ತು ಸಾಮರ್ಥ್ಯ ತಿಳಿಸುತ್ತದೆ.
ಸಾಂಪ್ರದಾಯಿಕ ಸಮಾಜದಲ್ಲಿ ಪುರುಷ ಪ್ರಧಾನವಾಗಿ ಸ್ತ್ರೀಯರಿಗೆ ಯಾವುದೇ ಸ್ಥಾನಮಾನ ಇಲ್ಲ ಎಂಬ ಕಾಲವೊಂದಿತ್ತು. ಆದರೆ ಇಂದು ಸಾಮಾಜಿಕ ಬದಲಾವಣೆಯೊಂದಿಗೆ ಸ್ತ್ರೀಪರವಾದ ಹೋರಾಟಗಳು ಮತ್ತು ಬದಲಾವಣೆಗಳು ಜರುಗಿ ಸ್ತ್ರೀಯನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗಿದೆ.
"ನ ಸ್ತ್ರೀ ಸ್ವಾತಂತ್ರ್ಯಮರ್ಹತಿ' ಎಂದು ಹೇಳಿದ ಕಾಲಘಟ್ಟದಲ್ಲಿ ಭಾರತದ ಪ್ರಥಮ ಮೊದಲ ಮಹಿಳಾ ಶಿಕ್ಷಕಿಯಾದ "ಸಾವಿತ್ರಿಬಾಯಿ ಪುಲೆ' ಧೈರ್ಯಗಾರಿಕೆ ಮೆಚ್ಚುವಂತಹದು. ಸಮಾಜದಲ್ಲಿ ಸ್ತ್ರೀ ಶಿಕ್ಷಣವನ್ನು ಧಿಕ್ಕರಿಸಿದ ಕಾಲದಲ್ಲೂ ಸಹ ಸಮಾಜದ ಮುಖ್ಯವಾಹಿನಿಗೆ ಬಂದು ಸಮಾಜದ ಎಲ್ಲ ಅವಮಾನಗಳನ್ನು ನಿಂದನೆಗಳನ್ನು ಸಹಿಸಿ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಮಹಿಳಾ ಶಿಕ್ಷಣದ ಸಬಲೀಕರಣಕ್ಕೆ ಮುನ್ನುಡಿಯಾದ ಧೀರ ಮಹಿಳೆ. ಹೀಗೆ ವೇದಕಾಲ, ಬೌದ್ಧ, ಇಸ್ಲಾಂ ಕಾಲದ ಶಿಕ್ಷಣ ಪದ್ಧತಿಗಳನ್ನು ಅವಲೋಕಿಸುತ್ತ ಬಂದಾಗ ಕೆಲವೇ ಕೆಲವಷ್ಟು ಮಹಿಳೆಯರಿಗೆ ಮಾತ್ರ ಶಿಕ್ಷಣ ಪಡೆಯಲು ಅವಕಾಶಗಳಿದ್ದವು.
1889 ರಲ್ಲಿ ಪ್ಯಾರಿಸ್​ ನಗರದಲ್ಲಿ ಅಂತಾರಾಷ್ಟ್ರೀಯ ಕಾಮಿರ್ಕ ಸಮಾವೇಶಮೊಂದು ಜರುಗಿದ್ದು ಅಲ್ಲಿ ಮಹಿಳಾ ಚಳವಳಿಯ ನಾಯಕಿ ಕ್ಲಾರಾ ಜೆಟ್ಕಿನ್​ ಪುರುಷರಿಗೆ ಇರುವಂತೆ ಮಹಿಳೆಯರಿಗೂ ಸಮಾನ ಹಕ್ಕುಗಳನ್ನು ನೀಡಬೇಕೆಂದು ತಮ್ಮ ಬೇಡಿಕೆಯನ್ನು ಮಂಡಿಸಿದ್ದರು. ಅಲ್ಲಿಂದ ಮಹಿಳಾಪರ ಹೋರಾಟ ಪ್ರಾರಂಭವಾಯಿತು. 1908 ಮಾ.8 ರಂದು ಅಮೇರಿಕಾದ ನ್ಯೂಯಾಕಿರ್ನ ಜವಳಿ ಗಿರಣಿಯಲ್ಲಿ ದುಡಿಯುತ್ತಿದ್ದ ಮಹಿಳೆಯರು ಪುರುಷರಿಗೆ ಕೊಡುವಷ್ಟೇ ವೇತನ ಮಹಿಳೆಯರಿಗೆ ನೀಡಬೇಕೆಂದು ಪ್ರತಿಭಟನೆ ಪ್ರಾರಂಭಿಸಿದರು. ಆದರೆ ಅಲ್ಲಿಯ ಆಡಳಿತ ವರ್ಗ ಅದನ್ನು ಒಪ್ಪದೆ ಹಲವಾರು ರೀತಿಯ ಹಿಂಸೆಯನ್ನು ಕೊಟ್ಟರೂ ಸಹ ಮಹಿಳಾ ಪರ ಹೋರಾಟ ನಿಲ್ಲಲಿಲ್ಲ. ಇದೇ ಬೇರೆ ಬೇರಿ ರೀತಿಯಲ್ಲಿ ವಿಶ್ವಾದ್ಯಂತ ಪ್ರತಿಭಟನೆ ಜರುಗಿದ್ದನ್ನು ಸ್ಮರಿಸಬಹುದು.

1945 ರಲ್ಲಿ ವಿಶ್ವಸಂಸ್ಥೆ ಸ್ಥಾಪನೆಗೊಂಡ ನಂತರ ಮಹಿಳಾ ದಿನ ಆಚರಿಸುವುದನ್ನು ಅಂಗೀಕರಿಸಿತು.
ನಮ್ಮ ಸಂವಿಧಾನದ ಆಶಯದಂತೆ ಸಮಾಜದಲ್ಲಿ ಸ್ತ್ರೀಯರಿಗೆ ಗೌರವದ ಸ್ಥಾನಗಳು ಮನಪೂರ್ವಕವಾಗಿ ಸಿಕ್ಕಾಗ ಮಾತ್ರ ನಿಜವಾದ ಸಬಲೀಕರಣ ಸಾಧ್ಯ. ಹಲವು ಮಹಿಳೆಯರು ಸಾಮಾಜಿಕ ವ್ಯವಸ್ಥೆಯಲ್ಲಿ ವೀರ ಸಾಹಸದ ಮೂಲಕ ತಮ್ಮ ಸಾಧನೆ ಮಾಡಿ ತೋರಿಸಿದ್ದಾರೆ. ಝಾನ್ಸಿರಾಣಿ ಲಕ್ಷಿ$್ಮಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಸಾಲುಮರದ ತಿಮ್ಮಕ್ಕ, ಕಲ್ಪನಾ ಚಾವ್ಲಾ, ಶಿವಾಜಿ ಮಹಾರಾಜ ತಾಯಿ ಜೀಜಾಬಾಯಿ, ಸ್ವಾಮಿ ವಿವೇಕಾನಂದರ ತಾಯಿ ಭುವನೇಶ್ವರಿದೇವಿ, ಭಗತ್​ ಸಿಂಗ್​ ನಂತಹ ದೇಶಪ್ರೇಮಿಯನ್ನು ಕೊಡುಗೆ ನೀಡಿದ ತಾಯಿ ವಿದ್ಯಾವತಿ ದೇವಿ ಹೀಗೆ ಮಹನೀಯರ ಆದರ್ಶ ಇಂದಿಗೂ ಪ್ರಸ್ತುತ. ಮದರ್​ ತೆರೆಸಾ, ಸುನಿತಾ ವಿಲಿಯಮ್ಸ್​, ಸುಧಾಮೂತಿರ್, ಸಾನಿಯಾ ಮಿರ್ಜಾ, ಕರ್ಣಂ ಮಲ್ಲೇಶ್ವರಿ, ಮುಂತಾದ ಧೀರ ಮಹಿಳೆಯರು ಎಲ್ಲ ಕಾಲದ ಸ್ತ್ರೀಯರಿಗೆ ಮಾದರಿಯಾಗಿದ್ದಾರೆ.
ಇಂದು ಮಹಿಳೆಯರಿಗಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಅದೆಷ್ಟು ಅವಕಾಶಗಳು ಸಂವಿಧಾನಕವಾಗಿ ಸಿಕ್ಕಿವೆ. ಇನ್ನೂ ಸಿಗಬೇಕಾದ ಅಗತ್ಯವಿದೆ. ಪ್ರತಿವರ್ಷ ನಡೆಸುವ ಈ ಅಂತಾರಾಷ್ಟ್ರೀಯ ಮಹಿಳಾ ದಿನ ಕೇವಲ ನೆಪವಷ್ಟೆ. ಮಹಿಯನ್ನು ಗೌರವದಿಂದ ಅಭಿಮಾನ ಪೂರ್ವಕವಾಗಿ ನಡೆದುಕೊಳ್ಳುವ ಪ್ರವೃತ್ತಿ ಜನಮನದಲ್ಲಿ ಎಂದು ಬರುತ್ತದೆಯೋ ಅಂದೇ ನಿಜವಾದ ಮಹಿಳಾ ಸಬಲೀಕರಣ ವಾಗುತ್ತದೆ.

  • - ಸುಧಾ ಹುಚ್ಚಣ್ಣವರ, ಉಪನ್ಯಾಸಕರು ಹಾಗೂ ಲೇಖಕರು, ಶಿರಹಟ್ಟಿ