ಜಿಲ್ಲೆ

ಕಿಚ್ಚನ ಕಟೌಟ್​ ಮುಂದೆ ಕೋಣ ಕಡಿದ ಪ್ರಕರಣ: ಎಫ್​ಐಆರ್​ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿ

ಬಳ್ಳಾರಿ: ನಟ ಸುದೀಪ್ ಹುಟ್ಟುಹಬ್ಬ (ಸೆ.2) ಹಿನ್ನೆಲೆಯಲ್ಲಿ ಅವರ ಕಟೌಟ್​ ಮುಂದೆ ಕೋಣ ಬಲಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಪ್ರಮುಖ ಆರೋಪಿಗಳು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು‌ ಜನರ ಮೇಲೆ ಎಫ್​ಐಆರ್​ ದಾಖಲಾಗಿದೆ.

ಎಫ್​ಐಆರ್​ ದಾಖಲಾಗುತ್ತಿದ್ದಂತೆ ಕೋಣ ಕಡಿದ ವ್ಯಕ್ತಿ ಸೇರಿ ಪ್ರಮುಖ ಆರೋಪಿಗಳೆಲ್ಲ ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಪ್ರಾಣಿಬಲಿ‌ ನಿಷೇಧ ಕಾಯ್ದೆ ಉಲ್ಲಂಘನೆ ಮತ್ತು‌ ಕರೊನಾ ನಿಯಮಗಳ‌ ಉಲ್ಲಂಘನೆ ಅಡಿ ಪ್ರಕರಣ ದಾಖಲಾಗಿದೆ. ನಿನ್ನೆ ದಿಗ್ವಿಜಯ ವರದಿ ಬೆನ್ನಲ್ಲೇ ಕೂಡ್ಲಿಗಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಅಭಿಮಾನಿಗಳು ಹುಚ್ಚಾಟವನ್ನು ಪ್ರದರ್ಶಿಸಿದ್ದರು. ಕಿಚ್ಚನ ಕಟೌಟ್ ಮುಂದೆ ಕೋಣವನ್ನು ಬಲಿ ನೀಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುದೀಪ್ ಅಭಿಮಾನಿಗಳು ಪ್ರಾಣಿ ಹಿಂಸೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿತ್ತು.

ಸುದೀಪ್​ ಅಸಮಾಧಾನ

ಅಭಿಮಾನಿಗಳು ಪ್ರಾಣಿ ಬಲಿ ನೀಡಿದ್ದನ್ನು ನಟ ಸುದೀಪ್​ ಕೂಡ ಖಂಡಿಸಿದರು. ನಿನ್ನೆ ವರ್ಚುವಲ್​ ಸಂದರ್ಶನದಲ್ಲಿ ಮಾತನಾಡುವಾಗ ಅಭಿಮಾನಿಗಳ ಅತಿರೇಕದ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ರೀತಿ ನಿಮ್ಮ ಅಭಿಮಾನವನ್ನು ವ್ಯಕ್ತಪಡಿಸಬೇಡಿ ಎಂದು ಬುದ್ಧಿಮಾತು ಹೇಳಿದ್ದಾರೆ.

ಈ ಘಟನೆ ಹೊಸದೇನಲ್ಲ..

‘ದಿ ವಿಲನ್’ ಚಿತ್ರ ಯಶಸ್ವಿಯಾಗಲಿ ಎಂಬ ಕಾರಣಕ್ಕೆ ದಾವಣಗೆರೆಯಲ್ಲಿ ಕೋಣ ಮತ್ತು ಕುರಿಯೊಂದನ್ನು ಬಲಿ ನೀಡಿ ರಕ್ತವನ್ನು ಚಿತ್ರದ ಪೋಸ್ಟರ್‌ಗೆ ಅರ್ಪಣೆ ಮಾಡಿರುವ ಘಟನೆ ಸಹ ಹಿಂದೆ ನಡೆದಿತ್ತು.