ನರೇಗಲ್ಲ: ಪಟ್ಟಣ ಮಾರ್ಗವಾಗಿ ತೆರಳುವ ಗದಗ- ಗಜೇಂದ್ರಗಡ ಹಾಗೂ ಗಜೇಂದ್ರಗಡ- ಗದಗ ಬಸ್ಗಳು ನರೇಗಲ್ಲ ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗದೆ ನೇರವಾಗಿ ಗದಗ ಅಥವಾ ಗಜೇಂದ್ರಗಡಕ್ಕೆ ತೆರಳುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ಶುಕ್ರವಾರ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟಿಸಿದರು.
ಗದಗ ಬಸ್ ನಿಲ್ದಾಣದಲ್ಲಿ ನರೇಗಲ್ಲಗೆ ಹೋಗಲು ಗಜೇಂದ್ರಗಡ ಬಸ್ ಹತ್ತಿದರೆ ನರೇಗಲ್ಲನಲ್ಲಿ ನಿಲುಗಡೆ ಮಾಡದೇ ನೇರವಾಗಿ ಗಜೇಂದ್ರಗಡಕ್ಕೆ ಹೋಗುತ್ತದೆ. ಇದರಿಂದ ನರೇಗಲ್ಲಗೆ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಬಸ್ ಸಂಚಾರ ತಡೆದು ಪ್ರತಿಭಟಿಸಿದರು.
ಸ್ಥಳಕ್ಕೆ ಮೇಲಾಧಿಕಾರಿಗಳು ಬಂದು ಈ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್ಗಳು ನರೇಗಲ್ಲ ಬಸ್ ನಿಲ್ದಾಣಕ್ಕೆ ಬಂದು ಹೋಗುವಂತೆ ಆದೇಶ ನೀಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಮಾಜಿ ಉಪಾಧ್ಯಕ್ಷ ನಿಂಗನಗೌಡ ಲಕ್ಕನಗೌಡ, ಬಸವರಾಜ ವಂಕಲಕುಂಟಿ ಮಾತನಾಡಿ, ನರೇಗಲ್ಲ ಪಟ್ಟಣಕ್ಕೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬಂದು ಹೋಗುತ್ತಾರೆ. ಪಟ್ಟಣದ ಉಪತಹಸೀಲ್ದಾರ್ ಕಚೇರಿಗೆ ಹೋಬಳಿಯ ನೂರಾರು ರೈತರು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಬರುತ್ತಾರೆ. ಆದರೆ, ಸಮರ್ಪಕವಾಗಿ ಬಸ್ ಸೌಕರ್ಯವಿಲ್ಲದೆ ಪರದಾಡುವ ಸ್ಥಿತಿ ನಿರ್ವಣವಾಗಿದೆ. ನರೇಗಲ್ಲ ಮೂಲಕ ಹಾದು ಹೋಗುವ ಬಸ್ಗಳು ನರೇಗಲ್ಲನಲ್ಲಿ ನಿಲುಗಡೆ ಮಾಡದೇ ಹೋಗುವಂತ ಅವಶ್ಯಕತೆ ಇದೇಯೇ? ನರೇಗಲ್ಲನಲ್ಲಿ ನಿಲುಗಡೆ ಇಲ್ಲವೆಂದರೆ ಈ ಮಾರ್ಗವಾಗಿ ಬಸ್ ಹೋಗಲು ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಗಜೇಂದ್ರಗಡ ಘಟಕ ವ್ಯವಸ್ಥಾಪಕ, ಸಂಚಾರ ನಿರೀಕ್ಷಣಾಧಿಕಾರಿ ಶೈಲಾ ಜಿಗಳೂರ, ಸಂಚಾರಿ ನಿಯಂತ್ರಕ ರಂಗ್ರೇಜಿ, ಪ್ರತಿಭಟನಾಕಾರರನ್ನು ಸಮಾಧಾನಿಸಿ, ಕೇವಲ ಆರು ಬಸ್ಗಳು ಮಾತ್ರ ಗಜೇಂದ್ರಗಡ- ಗದಗ ತಡೆರಹಿತ ಸಂಚಾರ ನಡೆಸುತ್ತಿವೆ. ಉಳಿದ ಬಸ್ಗಳು ನರೇಗಲ್ಲನಲ್ಲಿ ನಿಲುಗಡೆ ಆಗುತ್ತಿವೆ ಎಂದರು.
ಇದಕ್ಕೊಪ್ಪದ ಸಾರ್ವಜನಿಕರು ಬಹುತೇಕ ಎಲ್ಲ ಬಸ್ಗಳು ತಡೆರಹಿತವಾಗಿ ಸಂಚರಿಸುತ್ತಿದ್ದು, ಈ ಮಾರ್ಗದ ಎಲ್ಲ ಬಸ್ಗಳು ನರೇಗಲ್ಲಗೆ ತಡೆ ನೀಡಬೇಕು ಇಲ್ಲದಿದ್ದರೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಲಿಖಿತವಾಗಿ ಗಜೇಂದ್ರಗಡ-ಗದಗ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್ಗಳು ನರೇಗಲ್ಲ ನಿಲ್ದಾಣದಲ್ಲಿ ನಿಲುಗಡೆ ಆಗುವಂತೆ ಆದೇಶ ನೀಡಿದ ಹಿನ್ನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಯಲ್ಲಪ್ಪ ಮಣ್ಣೊಡ್ಡರ, ಕುಮಾರಸ್ವಾಮಿ ಕೋರಧಾನ್ಯಮಠ, ಮೈಲಾರಪ್ಪ ಚಳ್ಳಮರದ, ಸಂತೋಷ ಹನುಮಸಾಗರ, ರಾಜೇಂದ್ರ ಜಕ್ಕಲಿ, ಮಲ್ಲಪ್ಪ ಕುಂಬಾರ, ಶಿವು ಹೂಗಾರ, ಜಗದೇಶ ಹೊನವಾಡ, ಹನಮಂತ ಬಂಡಿವಡ್ಡರ.ಎಸ್.ಎ. ಪಾಟೀಲ, ಪಿ.ಎಚ್. ಪಾಟೀಲ ಇತರರಿದ್ದರು.