ಹಳೇಬೀಡಿನ ದ್ವಾರಸಮುದ್ರ ಕೆರೆಯ ಕೋಡಿ ಉಕ್ಕಿ ಹರಿಯುತ್ತಿದೆ. 
ಜಿಲ್ಲೆ

ದ್ವಾರಸಮುದ್ರ ಕೆರೆಯ ಹೊರಹರಿವು ದಿಢೀರ್ ಹೆಚ್ಚಳ

ಹಳೇಬೀಡು: ಇಲ್ಲಿನ ಐತಿಹಾಸಿಕ ದ್ವಾರಸಮುದ್ರ ಕೆರೆಯ ಹೊರಹರಿವಿನ ಪ್ರಮಾಣ ದಿಢೀರ್ ಹೆಚ್ಚಳವಾದ ಪರಿಣಾಮ ಕೋಡಿ ಹರಿಯುತ್ತಿದ್ದು, ಹಳ್ಳದ ಪಾತ್ರದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

ಜುಲೈ ತಿಂಗಳ ಮುಂಗಾರು ಮಳೆಯ ಆರ್ಭಟದ ಪರಿಣಾಮ ಹಳೇಬೀಡಿನ ಐತಿಹಾಸಿಕ ದ್ವಾರಸಮುದ್ರ ಕೆರೆಯು ಮೂರು ತಿಂಗಳಿಂದ ತುಂಬಿ ಹರಿಯುತ್ತಿದೆ. ಆದರೆ, ಸೋಮವಾರ ಸುರಿದ ಭಾರಿ ಮಳೆಯ ಕಾರಣ ಮಂಗಳವಾರ ಮುಂಜಾನೆಯಿಂದ ನೀರಿನ ಮಟ್ಟ ಹಾಗೂ ರಭಸ ದಿಢೀರ್ ಏರಿಕೆಯಾಗಿದ್ದು, ಕೆಂಪು ನೀರು ಕೋಡಿಯಿಂದ ಅಪಾರ ಪ್ರಮಾಣದಲ್ಲಿ ಹರಿದು ಹೋಗುತ್ತಿದೆ.

ಸೋಮವಾರ ಸಂಜೆಯಿಂದ ರಾತ್ರಿಯವರೆಗೆ ಹಳೇಬೀಡು ಸುತ್ತ ಮೂರು ಗಂಟೆಗೂ ಅಧಿಕ ಸಾಧಾರಣ ಮಳೆ ಸುರಿಯಿತು. ಆದರೆ, ದ್ವಾರಸಮುದ್ರ ಕೆರೆಗೆ ನೀರು ಹರಿದು ಬರುವ ಸೀಗೆ ಗುಡ್ಡ ಹಾಗೂ ಕಾಗೆದಳ್ಳದ ವ್ಯಾಪ್ತಿಯಲ್ಲಿ ಭಾರಿ ಮಳೆಯಾದ ಕಾರಣ ಕೆರೆಗೆ ಅಪಾರ ಪ್ರಮಾಣದಲ್ಲಿ ಕೆಂಪು ನೀರು ಹರಿದು ಬರುತ್ತಿದ್ದು, ಅಷ್ಟೇ ಹೊರಗೆ ಹೋಗುತ್ತಿದೆ. ಕೆರೆಯ ಮುಂದಿನ ಹಳ್ಳದಲ್ಲಿ ನೀರು ಭೋರ್ಗರೆಯುತ್ತಿದ್ದು, ತಗ್ಗುಪ್ರದೇಶವಾದ ಬೂದಿಗುಂಡಿ ನಿವಾಸಿಗಳು ಆತಂಕದಲ್ಲಿದ್ದಾರೆ. ಮಳೆಯು ಇನ್ನೂ ಮುಂದುವರಿಯುವ ಸೂಚನೆ ಇರುವುದರಿಂದ ಕೋಡಿಯಲ್ಲಿ ಭಾರಿ ಪ್ರಮಾಣದ ನೀರು ಹೊರಬರುವ ಸಂಭವವಿದೆ. ಈಗಾಗಲೇ ಮನೆಗಳ ಅಡಿಪಾಯದಲ್ಲಿ ಕೊರಕಲು ಉಂಟಾಗುತ್ತಿದ್ದು, ನೀರು ಹೆಚ್ಚಳವಾದರೆ ಭೂಕುಸಿತ ಉಂಟಾಗಲಿದೆ.

ದ್ವಾರಸಮುದ್ರ ಕೆರೆಯ ನೀರು ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮವನ್ನು ತಲುಪುತ್ತದೆ. ಆದರೆ, ಬೆಳವಾಡಿ ಕೆರೆ ಸೇರಿದಂತೆ ಪಾತ್ರದ ಮುಂದಿನ ಕೆರೆಗಳೆಲ್ಲ ಈಗಾಗಲೇ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರು ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರವನ್ನು ಸೇರುತ್ತಿದೆ.