ಜಿಲ್ಲೆ

ಎಳೆನೀರು ಬೆಲೆ ದಿಢೀರ್ ಕುಸಿತ ಬರೆ ಎಳೆದ ಚಳಿಗಾಲ

ಗಂಗಾಧರ್ ಬೈರಾಪಟ್ಟಣ ರಾಮನಗರ

ತೆಂಗು, ಕೊಬ್ಬರಿ ಆಯ್ತು, ಈಗ ಬೆಲೆ ಕುಸಿತದ ಸರದಿ ಎಳೆನೀರಿನದ್ದು. ತೆಂಗಿನ ಕಾಯಿಗೆ ಮಾರುಕಟ್ಟೆ ಇಲ್ಲ ಎನ್ನುವ ಕಾರಣಕ್ಕೆ ಬಹುತೇಕ ರೈತರು ಎಳೆನೀರು ಮಾರಾಟ ಮಾಡಲು ಮುಂದಾಗಿದ್ದರು. ಆದರೆ, ಇದೀಗ ಚಳಿಗಾಲ ಆರಂಭವಾಗುತ್ತಿದ್ದಂತೆ ಎಳೆನೀರಿನ ಬೆಲೆಯೂ ದಿಢೀರ್ ಕುಸಿತ ಕಂಡಿದೆ. ಕಳೆದ ಒಂದು ತಿಂಗಳ ಹಿಂದೆ 20-22 ರೂ.ವರೆಗೂ ಇದ್ದು ಒಂದು ಎಳೆನೀರಿನ ಬೆಲೆ ಈಗ ಕೇವಲ 12-14 ರೂ.ಗೆ ಬಂದು ನಿಂತಿದೆ.

ಜಿಲ್ಲೆಯಲ್ಲಿ ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಚನ್ನಪಟ್ಟಣ ತಾಲೂಕು ಒಂದರಲ್ಲಿಯೇ ಸುಮಾರು 11 ಸಾವಿರ ಹೆಕ್ಟೇರ್ ಪ್ರದೇಶ ತೆಂಗು ಬೆಳೆಯುತ್ತಾರೆ. ಕಳೆದ ಕೆಲವು ವರ್ಷಗಳಿಂದ ಮಳೆ ಕೊರತೆಯಿಂದಾಗಿ ಹೊಡೆತ ತಿಂದಿದ್ದ ರೈತರು, ಬೆಂಕಿ ರೋಗ, ನುಸಿ ಪೀಡೆಯಂತಹ ಬಾಧೆಯನ್ನೂ ಎದುರಿಸಿದ್ದಾರೆ. ಈಗಲೂ ನುಸಿ ಪೀಡೆ ರೋಗ ವ್ಯಾಪಕವಾಗಿದೆ. ಇದರ ಜತೆಗೆ ಬೆಲೆ ಕುಸಿತವೂ ರೈತರನ್ನು ನಿತ್ರಾಣಗೊಳಿಸಿದೆ. ಈ ಎಲ್ಲ ಬೆಳವಣಿಗೆ ನಡುವೆಯೇ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಎನ್ನುವ ಆಶಯವೂ ಇತ್ತು. ಆದರೆ ಬೆಲೆ ಕುಸಿತಗೊಂಡು ನಿರಾಸೆ ಮೂಡಿಸಿದೆ.

ಜಿಲ್ಲೆಯಲ್ಲಿ ವಾರ್ಷಿಕ ಸುಮಾರು 153000 ಮೆಟ್ರಿಕ್ ಟನ್ ತೆಂಗು ಉತ್ಪಾದನೆಯಾಗುತ್ತದೆ. ತೆಂಗಿನಕಾಯಿ ಬೆಲೆ ಕುಸಿತ ಕಂಡು ಬಹುತೇಕ 2 ವರ್ಷ ಕಳೆದಿವೆ. ಕೆ.ಜಿ.ಗೆ 40-42 ರೂ.ವರೆಗೂ ಮಾರಾಟವಾಗುತ್ತಿದ್ದ ತೆಂಗಿನ ಬೆಲೆ 20-22 ರೂ.ಗೆ ಇಳಿದಿತ್ತು. ಇದರಿಂದಾಗಿ ರೈತರು ಎಳೆನೀರು ಮಾರಾಟಕ್ಕೆ ಮುಂದಾಗಿದ್ದರು. ಇದರಿಂದಾಗಿ ವಾರ್ಷಿಕ ಉತ್ಪಾದನೆಯ ಶೇ.20ರಷ್ಟು ಎಳೆನೀರು ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ತೆಂಗಿಗೆ ಹೋಲಿಕೆ ಮಾಡಿದರೆ ಎಳೆನೀರು ಲಾಭದಾಯಕವಾಗಿದ್ದ ಕಾರಣ ರೈತರು ಸಹ ಇದರಲ್ಲಿ ಆಸಕ್ತಿ ತೋರಿದ್ದರು. ಆದರೆ, ಈಗ ಚಳಿಗಾಲ ಶುರುವಾಗಿದ್ದು, ಇದರ ಮೇಲೂ ಬರೆ ಎಳೆದಿದೆ.

ಬೆಲೆ ಕುಸಿತ

ಜಿಲ್ಲೆಯ ತೆಂಗಿಗೆ ಮುಂಬೈ ಮತ್ತು ಹೈದರಾಬಾದ್ ಪ್ರಮುಖ ಮಾರುಕಟ್ಟೆಗಳು.ಅದೇ ರೀತಿ ಮದ್ದೂರಿನಲ್ಲಿರುವ ಎಳೆನೀರು ಮಂಡಿ ಮೂಲಕ ಉತ್ತರ ಭಾರತದ ರಾಜ್ಯಗಳಿಗೆ ಎಳೆನೀರು ಹೆಚ್ಚಾಗಿ ಕಳಿಸಿಕೊಡಲಾಗುತ್ತದೆ. ರಾಮನಗರ ಜಿಲ್ಲೆಯ ಬಹುತೇಕ ಎಳೆನೀರು ಮದ್ದೂರು ಮಂಡಿಗೆ ಹೋಗುತ್ತದೆ. ಆದರೆ, ಈ ಬಾರಿ ಮಳೆ ಪ್ರಮಾಣ ಕಡಿಮೆ ಇದ್ದರೂ ಬೆಲೆ ಕುಸಿತ ಆಗಿರುವುದು ಸ್ವತಃ ಖರೀದಿದಾರರಿಗೆ ಆಶ್ಚರ್ಯ ತಂದಿದೆ. ಕಳೆದ ಒಂದು ತಿಂಗಳ ಹಿಂದೆ ಪ್ರತಿ ಎಳೆನೀರನ್ನು 20-22 ರೂ.ವರೆಗೂ ರೈತರಿಂದ ಖರೀದಿ ಮಾಡಲಾಗುತ್ತಿತ್ತು. ಆದರೆ, ಈಗ ಅದು 12-15 ರೂ. ಆಸುಪಾಸಿಗೆ ಬಂದು ನಿಂತಿದೆ.

ಗ್ರಾಹಕರಿಗೆ ಕಡಿಮೆ ಇಲ್ಲ

ರೈತರಿಂದ ಖರೀದಿ ಮಾಡುವ ಎಳೆನೀರು ಬೆಲೆ ಕುಸಿದಿದ್ದರೂ, ಗ್ರಾಹಕರ ಜೇಬಿಗೆ ಮಾತ್ರ ಎಳೆನೀರು ಭಾರವಾಗಿಯೇ ಇದೆ. ರಾಮನಗರ ಜಿಲ್ಲೆಯಲ್ಲಿ ಗ್ರಾಹಕರು ಕಡಿಮೆ ಎಂದರೆ 30 ರೂ. ನೀಡಿಯೇ ಎಳೆನೀರು ಕುಡಿಯಬೇಕು. ಇನ್ನು ಬೆಂಗಳೂರಿನಲ್ಲಿ ಇದರ ಬೆಲೆ 50 ರೂ.ವರೆಗೂ ತಲುಪಿದೆ. ಮಾರಾಟಗಾರರ ಬಳಿ ಇಷ್ಟೊಂದು ಬೆಲೆ ಏಕೆ ಎಂದರೆ ಖರ್ಚುಗಳು ಅಷ್ಟಿವೆ ಎನ್ನುವ ಉತ್ತರವನ್ನು ಕೊಡುತ್ತಾರೆ. ಆದರೆ, ರೈತರು ಮಾತ್ರ ಯಾವುದೇ ತಗಾದೆ ಮಾಡದೆ ಕೊಟ್ಟಷ್ಟು ಪಡೆದು ಮಾರಾಟ ಮಾಡಬೇಕಾಗಿದೆ.

ಸರ್ಕಾರ ಗಮನ ಹರಿಸಬೇಕಿದೆ

ರಾಜ್ಯದಲ್ಲಿ ಈಗ ತೆಂಗಿನ ಬಹುತೇಕ ಎಲ್ಲ ಉತ್ಪನ್ನಗಳಿಗೆ ಸಂಪೂರ್ಣವಾಗಿ ಬೆಲೆ ಕುಸಿದಿದೆ. ಒಂದೆಡೆ ತೆಂಗಿನ ಬೆಲೆ ಕುಸಿದಿದ್ದರೆ, ಅತ್ತ ಕೊಬ್ಬರಿ ಧಾರಣೆಯೂ ರೈತರ ನಿದ್ದೆಗೆಡಿಸಿದೆ. ಈಗ ಎಳೆನೀರು ಸಹ ರೈತರ ಪಾಲಿಗೆ ಕಹಿ ಆಗಿದೆ. ಆದರೆ, ಸರ್ಕಾರ ಮಾತ್ರ ತೆಂಗು ಉತ್ಪಾದಕರಿಗೆ ಸೂಕ್ತ ಯೋಜನೆಗಳನ್ನು ಜಾರಿಗೆ ತರುವ ನಿಟ್ಟನಲ್ಲಿ ವಿಫಲವಾಗಿದೆ ಎಂದರೆ ತಪ್ಪಾಗಲಾದರು. ಈಗಲಾದರೂ ಎಚ್ಚೆತ್ತು ರಾಮನಗರ ಸೇರಿ ರಾಜ್ಯದ ತೆಂಗು ಬೆಳೆಯುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ತೆಂಗಿನ ಉಪಉತ್ಪನ್ನಗಳ ತಯಾರಿಕೆಗೆ ಬೇಕಾದ ನೆರವು ಹಾಗೂ ಪ್ರೋತ್ಸಾಹ ನೀಡಬೇಕಿದೆ.

ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಮಾವು ಬೆಳೆಗಾರರು ನೋವುಂಡಿದ್ದರೆ, ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕು ವರ್ಷಗಳೇ ಕಳೆದಿವೆ. ಸರ್ಕಾರ ಈಗಲಾದರೂ ತೆಂಗಿಗೆ ಮೌಲ್ಯವರ್ಧನೆ ಮಾಡಲು ನೆರವು ನೀಡಬೇಕು.ಸಿ.ಪುಟ್ಟಸ್ವಾಮಿ, ರೈತ ಮುಖಂಡಎಳೆನೀರಿಗೆ ಬೇಡಿಕೆ ಕಡಿಮೆ ಆಗಿದೆ. ಬೇಸಿಗೆ ಆರಂಭಗೊಂಡರೆ ಬೆಲೆ ಏರಲಿದೆ. ಸದ್ಯದ ಪರಿಸ್ಥಿತಿಯಲ್ಲಿ ತೆಂಗಿನ ಕಾಯಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ.ಶಿವರಾಜ್, ಕೋಲೂರು ತೆಂಗು ವ್ಯಾಪಾರಿ, ಚನ್ನಪಟ್ಟಣ

=