ಜಿಲ್ಲೆ

ಏಕಾಏಕಿ ಕೆಲಸದಿಂದ ಗೇಟ್‌ಪಾಸ್: ನೊಂದ ನೌಕರರಿಂದ ಅರೆಬೆತ್ತಲೆ ಪ್ರತಿಭಟನೆ

ಮಂಡ್ಯ: ರಾಜಕೀಯ ದುರುದ್ದೇಶದಿಂದಾಗಿ ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದನ್ನು ಖಂಡಿಸಿ ಕೆಲ ದಿನದಿಂದ ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆ ಗುರುವಾರ ಜಿಲ್ಲಾಕೇಂದ್ರಕ್ಕೆ ವರ್ಗಾವಣೆಗೊಂಡಿತು. ಅದರಂತೆ ನಗರದ ಡಿಸಿ ಕಚೇರಿ ಎದುರು ಹಲವು ಸಂಘಟನೆಗಳ ಬೆಂಬಲದೊಂದಿಗೆ ನೌಕರರು ಉಪವಾಸ ಹಾಗೂ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ಕೆಆರ್‌ಎಸ್‌ನಲ್ಲಿ ನಾಲ್ಕು ದಿನದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರೂ ಕನಿಷ್ಟ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಬೇಸರಗೊಂಡ ನೌಕರರು ಡಿಸಿ ಕಚೇರಿ ಎದುರು ಧರಣಿ ನಡೆಸಿದರು. ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರು ಜನ ಹೊರಗುತ್ತಿಗೆ ನೌಕರರನ್ನು ರಾಜಕೀಯ ದುರುದ್ದೇಶದಿಂದ ಕೆಲಸದಿಂದ ತೆಗೆಯಲಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಬೃಂದಾವನದ ಉದ್ಯಾನದಲ್ಲಿ ಹೊರಗುತ್ತಿಗೆಯಲ್ಲಿ ಸ್ವಚ್ಛತಾ ಮತ್ತು ನಿರ್ವಹಣಾ ವಿಭಾಗಗಳಲಿ ಕೆಲಸ ಮಾಡುತ್ತಿದ್ದ ಮಹದೇವ, ಕೃಷ್ಣ, ಎಂ.ಎಸ್. ರವಿ, ಎನ್.ರತೀಶ್, ವಿ.ಮೋಹನ, ಜಿ.ಅನಿಲ್ ಅವರಿಗೆ ಜು.9ರಂದು ಏಕಾಏಕಿ ಯಾವುದೇ ನೋಟಿಸ್ ಹಾಗೂ ಮಾಹಿತಿ ನೀಡದೆ ರಾಜಕೀಯ ದುರುದ್ದೇಶದಿಂದ ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ ಮತ್ತು ಅವರ ಬಾಮೈದುನ ಮಂಜು ಅವರು ಮೌಖಿಕವಾಗಿ ಹೇಳಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೆಲಸದಿಂದ ತೆಗೆದು ದೌರ್ಜನ್ಯ ಎಸಗಿದ್ದಾರೆ. 130ಕ್ಕೂ ಹೆಚ್ಚು ನೌಕರರಿಗೆ ಕಳೆದ 6 ತಿಂಗಳಿನಿಂದ ಸಂಬಳ ನೀಡದಿರುವ ಬಗ್ಗೆ ಧರಣಿ ನಡೆಸುತ್ತಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಧರಣಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿ, ಜಿಲ್ಲಾಧ್ಯಕ್ಷ ಶ್ರೀನಿವಾಸ್, ಕೆಆರ್‌ಎಸ್ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ನರಸಿಂಹ, ಸದಸ್ಯರಾದ ಮಂಜುನಾಥ್, ಪ್ರಕಾಶ್, ಮಾಜಿ ಅಧ್ಯಕ್ಷ ನಾಗೇಂದ್ರಕುಮಾರ್, ನಾರಾಯಣಸ್ವಾಮಿ, ಎಂ.ಎಸ್.ರಾಮ್, ವಿನೋದ, ಸುಂಕಮ್ಮ, ಪ್ರಮೀಳ, ಕೆ.ಎಸ್.ಮೀನಾಕ್ಷಿ ಇತರರಿದ್ದರು.