ಜಿಲ್ಲೆ

ಪ.ಪಂ. ಅಧಿಕಾರಿಗಳ ದಿಢೀರ್ ದಾಳಿ

ಪ್ರಸಿನ್ ಕೆ.ಆರ್

ಹನೂರು: ಪಟ್ಟಣ ವ್ಯಾಪ್ತಿಯ ಅಂಗಡಿಗಳಿಗೆ ಬುಧವಾರ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದರು.

ಸರ್ಕಾರ ಏಕ ಬಳಕೆಯ ವಸ್ತುಗಳನ್ನು ನಿಷೇಧಿಸಿದೆ. ಈ ಬಗ್ಗೆ ಹಲವು ಬಾರಿ ಕರಪತ್ರದ ಮೂಲಕ ಜಾಗೃತಿ ಮೂಡಿಸಲಾಗಿದೆ. ಹೀಗಿದ್ದರೂ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಾರಾಟಕ್ಕೆ ಕಡಿವಾಣ ಬಿದ್ದಿರಲಿಲ್ಲ. ಈ ಹಿನ್ನಲೆ ಸಮುದಾಯ ಸಂಘಟನಾಧಿಕಾರಿ ಚಂದ್ರಕುಮಾರ್ ಹಾಗೂ ಸಿಬ್ಬಂದಿ ಅಂಗಡಿಗಳ ಮೇಲೆ ದಾಳಿ ನಡೆಸಿ ಏಕ ಬಳಕೆಯ ಪ್ಲಾಸ್ಟಿಕ್ ಕೈ ಚೀಲ, ಲೋಟ ಹಾಗೂ ಇನ್ನಿತರೆ ಸುಮಾರು 10 ಕೆ.ಜಿ.ಗೂ ಹೆಚ್ಚು ಪ್ಲಾಸ್ಟಿಕ್ ವಸ್ತುಗಳನ್ನು ಪಡೆದರು. ಇನ್ನು ಮುಂದೆ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಬ್ಬಂದಿ ಪ್ರಭಾಕರ್, ಪ್ರಕಾಶ್, ಕೆಂಪರಾಜು, ಶರತ್ ಇತರರಿದ್ದರು.