ಜಿಲ್ಲೆ

ಸುದರ್ಶನ ದೇಸಾಯಿ ಕೊಡುಗೆ ಸ್ಮರಣೀಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಪತ್ತೆದಾರಿ ಕಾದಂಬರಿಕಾರ ಸುದರ್ಶನ ದೇಸಾಯಿ ಅವರ ಸಮಗ್ರ ಸಾಹಿತ್ಯ ಕುರಿತು ವಿಚಾರ ಸಂಕಿರಣ ಆಯೋಜಿಸಿ ಅವರ ವೈವಿಧ್ಯ ಸಾಹಿತ್ಯ ಪ್ರಪಂಚವನ್ನು ಸಾಹಿತ್ಯಾಸಕ್ತರ ಎದುರು ಅನಾವರಣಗೊಳಿಸುವುದು ಅಗತ್ಯ ಎಂದು ಹಿರಿಯ ಚಿಂತಕ ಡಾ. ಶಾಮಸುಂದರ ಬಿದರಕುಂದಿ ಹೇಳಿದರು.
ನಗರದ ಮನೋಹರ ಗ್ರಂಥಮಾಲಾ ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್​ ಟ್ರಸ್ಟ್​ ವತಿಯಿಂದ ಇಲ್ಲಿನ ಮನೋಹರ ಗ್ರಂಥಮಾಲಾದಲ್ಲಿ ಬುಧವಾರ ಏರ್ಪಡಿದ್ದ ಸುದರ್ಶನ ದೇಸಾಯಿ ಅವರ 12ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳದಿ ಚೇಳು ಎಂಬ ಸುಪ್ರಸಿದ್ಧ ಪತ್ತೆದಾರಿ ಕಾದಂಬರಿ ಬರೆದ ಸುದರ್ಶನ ದೇಸಾಯಿ ಕೇವಲ ಕಾದಂಬರಿಕಾರರು ಮಾತ್ರವಲ್ಲ. ಕತೆಗಾರರು, ನಾಟಕಕಾರರಾಗಿದ್ದರು. ಮಕ್ಕಳ ಸಾಹಿತ್ಯ ರಚನೆ ಮಾಡಿದ್ದಾರೆ. ಶಿಕ್ಷಕರಾಗಿದ್ದ ಅವರು ಕ್ರಿಯಾಶೀಲ ಲೇಖಕರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ದೇಸಾಯಿ ನೀಡಿದ ಕೊಡುಗೆಯನ್ನು ಸ್ಮರಿಸಬೇಕು ಎಂದರು.
ಸುದರ್ಶನ ದೇಸಾಯಿ ಅವರ ಕಲ್ಪನಾ ಶಕ್ತಿ ಅದ್ಭುತ. ಅವರು ಒಟ್ಟು 112 ಕೃತಿಗಳನ್ನು ರಚಿಸಿದ್ದಾರೆ. ಸಿನೆಮಾ ಪ್ರಭಾವಕ್ಕೊಳಗಾಗಿ ಕಾದಂಬರಿಗಳಿಗೆ ಮಸಾಲೆ ಬೆರೆಸಲಾರಂಭಿಸಿದ್ದು, ಅವರ ವಿಫಲತೆ ಎನ್ನಬಹುದು. ಆದರೆ ಅವರು ತಮ್ಮ ಕಾದಂಬರಿಗಳಲ್ಲಿನ ಶೃಂಗಾರ ಸನ್ನಿವೇಶಗಳನ್ನು ಸರ್ಮಥಿಸಿಕೊಳ್ಳುತ್ತಿದ್ದರು ಎಂದರು.
ಸುದರ್ಶನ ದೇಸಾಯಿ ಪುತ್ರಿ ವೀಣಾ ದೇಸಾಯಿ ಮಾತನಾಡಿದರು. ಡಾ. ರಮಾಕಾಂತ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಹರ್ಷ ಡಂಬಳ, ದುಷ್ಯಂತ ನಾಡಗೌಡ, ರೇಖಾ ಶರ್ಮಾ, ಡಾ. ಪ್ರಕಾಶ ಗರುಡ, ಸಮೀರ ಜೋಶಿ, ಎಸ್​.ಎನ್​. ದೇಶಪಾಂಡೆ, ಇತರರು ಇದ್ದರು. ಡಾ. ಹ.ವೆಂ. ಕಾಖಂಡಿಕಿ ನಿರೂಪಿಸಿದರು.