ವಿಜಯಪುರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ಎಸ್‌ಯುಸಿಐ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಿ. ಭಗವಾನರೆಡ್ಡಿ, ಅಕ್ರಮ ಮಾಶಾಳಕರ, ಸಿದ್ಧಲಿಂಗ ಬಾಗೇವಾಡಿ ಮತ್ತಿತರರಿದ್ದಾರೆ. 
ಜಿಲ್ಲೆ

ಎಸ್‌ಯುಸಿಐ ಪ್ರತಿಭಟನಾ ಮೆರವಣಿಗೆ

ಗಿರೀಶ ಸಗರ

ವಿಜಯಪುರ: ನಗರದಲ್ಲಿ ಸಿಟಿ ಬಸ್ ಮತ್ತು ಜಿಲ್ಲೆಯಲ್ಲಿ ಸಾಮಾನ್ಯ ಬಸ್‌ಗಳನ್ನು ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೋಷಿಯಾಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ನಗರದ ಹೃದಯ ಭಾಗದಲ್ಲಿರುವ ನವಭಾಗ ಮುಖ್ಯ ರಸ್ತೆ ಸೇರಿ ಹಾಳಾಗಿರುವ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸುವುದು.

ಸಂಕಷ್ಟದಲ್ಲಿರುವ ರೈತರಿಗೆ ಬರ ಪರಿಹಾರ ಒದಗಿಸುವುದು. ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜ್‌ಗಳನ್ನು ಪ್ರಾರಂಭಿಸುವುದು.

ಸರ್ಕಾರಿ ಆಸ್ಪತ್ರೆಯ ಖಾಸಗೀಕರಣ ಮಾಡುವುದನ್ನು ಕೈಬಿಡುವುದು ಮತ್ತು ಜಿಲ್ಲಾ ಕ್ರೀಡಾಂಗಣವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವುದು ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಎಸ್‌ಯುಸಿಐ ಸಮಿತಿ ಕಾರ್ಯದರ್ಶಿ ಬಿ. ಭಗವಾನರೆಡ್ಡಿ, ಜಿಲ್ಲೆಯಲ್ಲಿ ತಲೆದೋರಿರುವ ಗಂಭೀರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.

ಸಮಸ್ಯೆಗಳನ್ನು ಆಲಿಸಿ ಕೇವಲ ಮೊಸಳೆ ಕಣ್ಣೀರು ಹಾಕಿದ್ದಾರೆಯೇ ವಿನಃ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಚುನಾವಣೆ ಬಂದಾಗ ಮಾತ್ರ ಇವರಿಗೆ ಜನರು ನೆನಪಿಗೆ ಬರುತ್ತಾರೆ. ಉಳಿದ ವೇಳೆ ಜನರ ನೆನಪೇ ಆಗುವುದಿಲ್ಲ ಎಂದು ದೂರಿದರು.

ಸ್ಲಂ ಅಭಿವೃದ್ಧಿ ಸಮಿತಿಯ ಅಕ್ರಮ ಮಾಶಾಳಕರ ಮಾತನಾಡಿದರು. ಮಲ್ಲಿಕಾರ್ಜುನ ಹೆಚ್.ಟಿ, ಸಿದ್ಧಲಿಂಗ ಬಾಗೇವಾಡಿ, ಶಿವಬಾಳಮ್ಮ ಕೊಂಡಗೂಳಿ, ಮಾದಪ್ಪಾ ಶಿವಣಗಿ, ಶಿವರಂಜಿನಿ ಎಸ್.ಬಿ., ನಿವೃತ್ತ ಪ್ರಾವಾರ್ಯ ವಿ.ಎ. ಪಾಟೀಲ, ಅನು ಸೋಧಿ, ಸುಮಿತ್ರಾ ಮಣೂರ, ಗಂಗಾಬಾಯಿ ಮತ್ತಿತರರಿದ್ದರು.