ಜಿಲ್ಲೆ

ಜಿಲ್ಲಾಸ್ಪತ್ರೆಯಲ್ಲಿ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ

ಮಂಜುನಾಥ ಅಂಗಡಿ

ಧಾರವಾಡ: ಜಿಲ್ಲಾಸ್ಪತ್ರೆಯಲ್ಲಿ ವಿವಿಧ ಶುಲ್ಕ ಏರಿಕೆ ಮತ್ತು ತಪಾಸಣೆಗೆ ಶುಲ್ಕ ವಿಧಿಸಿರುವುದನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆ್ ಇಂಡಿಯಾ ಕಮ್ಯುನಿಸ್ಟ್ (ಎಸ್‌ಯುಸಿಐ- ಸಿ) ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ ಸಂಗ್ರಹಿಸುತ್ತಿರುವ ಎಲ್ಲ ರೀತಿಯ ಶುಲ್ಕ ಹೆಚ್ಚಳವನ್ನು ಕೈ ಬಿಡಬೇಕು. ಆಸ್ಪತ್ರೆಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮ್ಮಣ ಜಡಗನ್ನವರ ಮಾತನಾಡಿ, ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ, ಆಹಾರದಂಥ ಮೂಲ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ, ಆಳುವ ಸರ್ಕಾರಗಳ ಜನವಿರೋಧಿ ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಶಿಕ್ಷಣ, ಆರೋಗ್ಯದ ಖಾಸಗೀಕರಣ ಜನರ ಬದುಕನ್ನು ಹೈರಾಣಾಗಿಸಿವೆ. ಸರ್ಕಾರಗಳು ಆರೋಗ್ಯ ಕ್ಷೇತ್ರದ ಖಾಸಗೀಕರಣಕ್ಕೆ ಕುಮ್ಮಕ್ಕು ಕೊಡುತ್ತ ಬಂದಿವೆ. ಜಿಲ್ಲೆಯ ಬಡವರು, ಜನಸಾಮಾನ್ಯರು ಜಿಲ್ಲಾಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಆದರೆ, ಜಿಲ್ಲಾಸ್ಪತ್ರೆಯು ಅವ್ಯವಸ್ಥೆಗಳ ಆಗರವಾಗಿದೆ. ನೋಂದಣಿ, ವಿವಿಧ ಪರೀಕ್ಷೆ ಮಾಡಿಸಲು ಬಿಲ್ ತುಂಬಲು ಗಂಟೆಗಟ್ಟಲೆ ರೋಗಿಗಳು ಕಾಯಬೇಕು. ಈ ಸಮಸ್ಯೆಗಳನ್ನು ಪರಿಹರಿಸಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಬದಲು ಸರ್ಕಾರ, ಜಿಲ್ಲಾಡಳಿತ ಹೆಚ್ಚಿನ ಶುಲ್ಕದ ಹೊರೆ ಹಾಕಿದೆ ಎಂದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಡಿ. 6ರಂದು ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಶಸಚಿಕಿತ್ಸಕರ ಸಭೆ ಕರೆದಿದ್ದಾರೆ. ಈ ಕುರಿತು ಚರ್ಚಿಸಲಾಗುವುದು ಎಂದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಭುವನಾ, ದೀಪಾ ಧಾರವಾಡ, ಶರಣು ಗೋನವಾರ, ಮಧುಲತಾ ಗೌಡರ, ಭವಾನಿಶಂಕರ ಗೌಡ ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.