ಪೂರಕ ಸೌಲಭ್ಯಗಳಿಲ್ಲದೆ ಕಾಲೇಜು ವಿದ್ಯಾರ್ಥಿಗಳ ಪರದಾಟ > ಹೋಗಿ ಬರಲೂ ಅನುಕೂಲವಿಲ್ಲ
ಚೇತನ್ ಚಕ್ಕೆರೆ ಬಿಡದಿ
ಕಾಲೇಜು ಎಂದ ಮೇಲೆ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಇರಬೇಕು. ಆದರೆ ಇಲ್ಲೊಂದು ಕಾಲೇಜಿನಲ್ಲಿ ಅಂತಹ ವಾತಾವರಣ ಕಾಣಲು ಸಾಧ್ಯವೇ ಇಲ್ಲ. ಗುಣಮಟ್ಟದ ಶಿಕ್ಷಣ ಇದ್ದರೂ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿದೆ. ಅದರಲ್ಲೂ ಸೂಕ್ತ ಸಾರಿಗೆ ವ್ಯವಸ್ಥೆ ಮತ್ತಿತರ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ.
ಪಟ್ಟಣದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಕೇತುಗಾನಹಳ್ಳಿ ರಸ್ತೆಯಲ್ಲಿರುವ ಪ್ರಥಮ ದರ್ಜೆ ಕಾಲೇಜು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಇದ್ದರೂ ಪೂರಕ ವಾತಾವರಣವಿಲ್ಲ. ಕಲ್ಲುಬಂಡೆ, ಗಿಡಗಂಟಿ ನಡುವೆ ಕಾಲೇಜು ನಿರ್ಮಾಣವಾಗಿದೆ.
ಬೆಳೆದು ನಿಂತ ಗಿಡ ಗಂಟಿಗಳು
ಗಿಡಗಂಟಿಗಳು ಬೆಳೆದು, ಕಲ್ಲುಬಂಡೆಗಳು ಆವರಿಸಿರುವುದರಿಂದ ಈ ಜಾಗದಲ್ಲಿ ಕಾಲೇಜು ಇರುವುದೇ ಗೊತ್ತಾಗುವುದಿಲ್ಲ. ಕಾಲೇಜಿನ ಗೋಡೆಗೆ ಹೊಂದಿಕೊಂಡಂತೆ ಗಿಡಗಳು ಬೆಳೆದಿದ್ದು ಹಾವು ಮತ್ತಿತರ ವಿಷಜಂತುಗಳು ಕಾಲೇಜಿನ ಕೊಠಡಿಗಳನ್ನು ಪ್ರವೇಶ ಮಾಡುತ್ತವೆ. ಭಯದ ವಾತಾವರಣದಲ್ಲೇ ವಿದ್ಯಾರ್ಥಿಗಳು ಪಾಠ ಪ್ರವಚನ ಕೇಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಕಾಲೇಜು ಅಂದ ಮೇಲೆ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಸೂಕ್ತ ಆಟದ ಮೈದಾನ ಇರಬೇಕು. ಆದರೆ, ಕಾಲೇಜಿನಲ್ಲಿ ಆಟದ ಮೈದಾನ ಇದ್ದರೂ ಪ್ರಯೋಜನಕ್ಕೆ ಬಾರದಾಗಿದೆ. ಕ್ರೀಡಾಪ್ರತಿಭೆಗಳಿದ್ದರೂ ಅಭ್ಯಾಸ ಸಾಧ್ಯವಾಗುತ್ತಿಲ್ಲ. ಕಿರಿದಾದ ಮೈದಾನದ ತುಂಬೆಲ್ಲ ಗಿಡಗಂಟಿಗಳು ಬೆಳೆದಿವೆ. ಇದರ ಸ್ವಚ್ಛತೆಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ.
ಮುಖ್ಯರಸ್ತೆಯಿಂದ ತುಸು ದೂರದಲ್ಲಿ ಕಾಲೇಜು ಇದೆ. ಗಿಡಗಂಟಿ, ಕಲ್ಲು ಬಂಡೆಗಳು ಇರುವ ಕಾರಣದಿಂದಾಗಿ ಇದು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಸಂಜೆ ಆಗುತ್ತಿದ್ದಂತೆ ಮದ್ಯ ಸೇವನೆ ಸೇರಿ ಇತರ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಕಾಲೇಜಿನ ಎದುರೇ ಮದ್ಯಪಾನ ಮಾಡಿ ಎಸೆದ ಖಾಲಿ ಬಾಟಲ್ಗಳು ಬೀಡಿ, ಸಿಗರೇಟಿನ ತುಂಡುಗಳು ಕಾಣಸಿಗುತ್ತವೆ. ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಇದರಿಂದ ಕಿರಿಕಿರಿ ಉಂಟಾಗುತ್ತಿದೆ.
ಕಾಲೇಜಿಗೆ ಸೇರಿದ ಜಾಗಕ್ಕೆ ಬಂದೋಬಸ್ತ್ ಮಾಡಿಲ್ಲ. ಕಾಲೇಜು ಆವರಣಕ್ಕೆ ಒಂದು ಭಾಗ ಬಿಟ್ಟರೆ ಸಂಪೂರ್ಣವಾಗಿ ಕಾಂಪೌಂಡ್ ನಿರ್ಮಾಣ ಮಾಡಿಲ್ಲ. ಒಂದು ಬದಿ ನಿರ್ಮಿಸಿದ್ದ ಕಾಂಪೌಂಡ್ ಕುಸಿದಿದೆ. ಹಾಗಾಗಿ ಯಾರು ಬೇಕಾದರೂ ಕಾಲೇಜು ಆವರಣಕ್ಕೆ ಅನಧಿಕೃತವಾಗಿ ಪ್ರವೇಶಿಸಬಹುದಾಗಿದೆ.
ಬಸ್ ಸೌಲಭ್ಯವಿಲ್ಲ
ಬಿಡದಿಯಿಂದ 1.5 ಕಿ.ಮೀ ದೂರವಿರುವ ಕಾಲೇಜಿಗೆ ಸೂಕ್ತ ಸಾರಿಗೆ ಸಂಸ್ಥೆ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಪ್ರತಿದಿನ ವಿದ್ಯಾರ್ಥಿಗಳು ನಡೆದು ಹೋಗಬೇಕಾಗಿದೆ. ಬಸ್ ವ್ಯವಸ್ಥೆ ಕಲ್ಪಿಸುವಂತೆ
ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.
ಕಾಲೇಜಿನ ಸಿಡಿಸಿ ಅಧ್ಯಕ್ಷರೂ ಆಗಿರುವ ಶಾಸಕರು ಕಾಲೇಜಿನ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ. ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಕಾಲೇಜಿಗೆ ಭೇಟಿ ನೀಡಿ ಆಗಬೇಕಿರುವ ಅಭಿವೃದ್ಧಿ ಯೋಜನೆಗಳತ್ತ ಗಮನ ಕೊಟ್ಟು ಆದಷ್ಟು ಬೇಗ ಕಾಲೇಜಿಗೆ ಕಾಯಕಲ್ಪ ನೀಡಬೇಕಿದೆ.
ಎಚ್.ಸಿ.ಬಾಲಕೃಷ್ಣ, ಶಾಸಕ ಹಾಗೂ ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ
ಕಾಕರಾಮನಹಳ್ಳಿ ಹೇಮಂತ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ