ಹುಬ್ಬಳ್ಳಿ: ಕಾಡಿನಲ್ಲಿ ಕರಡಿಗಳ ದಾಳಿಗೆ ತುತ್ತಾಗಿ ತೀವ್ರ ರಕ್ತಸ್ರಾವದಿಂದ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದ ವ್ಯಕ್ತಿಗೆ ಸೂಕ್ತ ಶಸ್ತ್ರಚಿಕಿತ್ಸೆ ಮೂಲಕ ಮರು ಜೀವ ನೀಡುವಲ್ಲಿ ನಗರದ ವೈದ್ಯರು ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಡೇರಿಯಾ ಗ್ರಾಮದ ಬಳಿ ಎರಡು ತಿಂಗಳ ಹಿಂದೆ ಏಕಕಾಲಕ್ಕೆ ಮೂರು ಕರಡಿಗಳ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಶಾಂತಾ ಹನುಮಂತ ಡೇರೆಕರ್ (53) ಎಂಬುವವರೇ ಪುನರ್ಜನ್ಮ ಪಡೆದವರು. ಇಲ್ಲಿಯ ಬಾಲಾಜಿ ಆಸ್ಪತ್ರೆಯ ಚೇರ್ಮನ್ ಡಾ. ಕ್ರಾಂತಿಕಿರಣ ಹಾಗೂ ವೈದ್ಯರ ತಂಡ ಈ ಸಾಧನೆ ಮಾಡಿದೆ.
ಹೇಗಿತ್ತು ಚಿಕಿತ್ಸೆ: ಆ. 18ರಂದು ಕರಡಿ ದಾಳಿಗೆ ತುತ್ತಾಗಿ ಬಾಲಾಜಿ ಆಸ್ಪತ್ರೆಗೆ ಬಂದ ನಂತರ ಹೇಗೆಲ್ಲ ಚಿಕಿತ್ಸೆ ನೀಡಲಾಯಿತು ಎಂಬುದನ್ನು ಡಾ. ಕ್ರಾಂತಿಕಿರಣ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಶಾಂತಾ ಅವರು ಏಕ ಕಾಲಕ್ಕೆ ತಾಯಿ ಹಾಗೂ ಮರಿ ಸೇರಿ ಮೂರು ಕರಡಿಗಳಿಂದ ದಾಳಿಗೆ ಒಳಗಾಗಿದ್ದರು. ಅವರ ಮುಖದ ತುಂಬಾ ಗಂಭೀರ ಗಾಯಗಳಾಗಿದ್ದವು. ಅವರ ದವಡೆಯ ಮೂಳೆಗಳು ಮುರಿದು ಹೋಗಿದ್ದವು. ತಲೆ, ಕುತ್ತಿಗೆ, ಎದೆ, ಬೆನ್ನು, ಕೈಕಾಲಿನಲ್ಲಿ ಹಲವಾರು ಗಂಭೀರ ಗಾಯಗಳಿದ್ದವು. ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದ ಅವರು ಕುಂಬಾರವಾಡದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜೋಯಿಡಾದ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಾಲಾಜಿ ಆಸ್ಪತ್ರೆಗೆ ದಾಖಲಾದರು. ಬರುವ ಮೊದಲೇ ಅವರು ಮಾಹಿತಿ ನೀಡಿದ್ದರಿಂದ ಶಸ್ತ್ರ ಚಿಕಿತ್ಸೆಗೆ ಎಲ್ಲ ತಯಾರಿ ಮಾಡಿಕೊಳ್ಳಲಾಗಿತ್ತು.
ತಜ್ಞ ವೈದ್ಯರಾದ ಡಾ. ನೀಲಕಮಲ್ ಹಳ್ಳೂರ್, ಡಾ. ರವಿ ನೇಮಗೌಡ, ಡಾ. ವಿನಯ್ ಅರಕಂಚಿ ಹಾಗೂ ಇತರರು ಅಗತ್ಯ ಮುಂಜಾಗ್ರತ ಕ್ರಮಗಳೊಂದಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದರು.
ಎರಡು ವಾರ ತೀವ್ರ ನಿಗಾ ಘಟಕದಲ್ಲಿ ಜಾಗರೂಕತೆಯಿಂದ ಆರೈಕೆ ಮಾಡಿ ಇತರ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ವ್ಯಕ್ತಿಯ ಪ್ರಾಣ ಉಳಿಸಲಾಗಿದೆ ಎಂದರು.
ಇವರ ಚಿಕಿತ್ಸೆಗೆ ಕುಟುಂಬದವರು, ಅರಣ್ಯ ಇಲಾಖೆಯವರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ಡಾ. ಜನಮೇಜಯ, ಡಾ. ವಿನಯ ಅರಕಂಚಿ, ಇತರರು ಉಪಸ್ಥಿತರಿದ್ದರು.