ಸಿದ್ದಾಪುರ ಸಹಕಾರಿ ಸಂಘಗಳು ಬೆಳೆದರೆ ರೈತರಿಗೆ, ಸದಸ್ಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸದಸ್ಯರ ಆರ್ಥಿಕ ಸಮಸ್ಯೆಗೆ ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸುವುದು ಸಹಕಾರಿ ಸಂಘಗಳು ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯ ಹೇಳಿದರು.
ತಾಲೂಕಿನ ವಂದಾನೆಯಲ್ಲಿ ದೊಡ್ಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ನೂತನ ಗೋದಾಮನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿತ್ತು. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಎಲ್ಲ ಸಮುದಾಯದ ಎಲ್ಲ ಜನರಿಗೂ ಯೋಜನೆಗಳನ್ನು ತಲುಪಿಸುವ ಕಾರ್ಯ ನಮ್ಮದು. ನಾವು ರಾಜಕಾರಣ ಮಾಡುತ್ತಿಲ್ಲ. ಜನರಿಗೆ 10 ಕೆಜಿ ಅಕ್ಕಿ ಕೊಡುವ ಕಾರ್ಯಕ್ರಮ ಆಶ್ವಾಸನೆ ಕೊಟ್ಟಂತೆ ಕೊಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಹಕಾರಿ ಸಂಘಗಳು ಜನರ ನಾಡಿ- ಮಿಡಿತವಾಗಿವೆ. ಮಾನವೀಯತೆಯ ಮೇಲೆ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಜನತೆಗೆ ಬಹಳ ಹತ್ತಿರವಾಗಿವೆ. ಇದು ನಿರಂತರವಾಗಿರಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಶಿರಸಿ- ಸಿದ್ದಾಪುರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಹೆಚ್ಚು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸದಸ್ಯರು ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ತಮ್ಮ ಮಹಸೂಲನ್ನು ಟಿಎಸ್ಎಸ್ ಮೂಲಕ ವ್ಯಾಪಾರ ಮಾಡಿ ಟಿಎಸ್ಎಸ್ನ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು.
ಸಂಘದ ಅಧ್ಯಕ್ಷ ಸುಬ್ರಾಯ ಎನ್. ಭಟ್ಟ ಗಡಿಹಿತ್ಲ, ಉಪಾಧ್ಯಕ್ಷ ಚೌಡು ಗೌಡ, ಕ್ಯಾದಗಿ ಗ್ರಾಪಂ ಅಧ್ಯಕ್ಷ ರಾಮಕೃಷ್ಣ ನಾಯ್ಕ, ದೊಡ್ಮನೆ ಗ್ರಾಪಂ ಅಧ್ಯಕ್ಷೆ ಶಾರದಾ ಹೆಗಡೆ, ಸಂಘದ ನಿರ್ದೇಶಕರು, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಇತರರಿದ್ದರು.
ವಿವೇಕ ಭಟ್ಟ ಗಡಿಹಿತ್ಲ, ದಿವಾಕರ ಭಟ್ಟ, ರಾಮಕೃಷ್ಣ ಭಟ್ಟ, ಅಪರ್ಣಾ ಶಾಸ್ತ್ರಿ ನಿರ್ವಹಿಸಿದರು.
-
ಮುಗ್ತೆ ಹೊಳೆಗೆ ಮುಕ್ತಿ
ಸಿದ್ದಾಪುರ- ಹೊನ್ನಾವರ ತಾಲೂಕಿನ ಸಂಪರ್ಕದ ಕೊಂಡಿಯಾಗಿರುವ ಮುಗ್ತೆಹೊಳೆಗೆ ಸೇತುವೆ ಆಗಬೇಕಾಗಿದ್ದು, ಇದನ್ನು ನಿರ್ವಿುಸಿ ಆ ಭಾಗದ ಸುತ್ತಲಿನ ಜನತೆಯ ಹಲವು ವರ್ಷದ ಬೇಡಿಕೆಯನ್ನು ಶೀಘ್ರ ಈಡೇರಿಸುತ್ತೇವೆ ಎಂದು ಶಾಸಕ ಭೀಮಣ್ಣ ನಾಯ್ಕ ಭರವಸೆ ನೀಡಿದರು. ಆ.29ರಂದು ವಿಜಯವಾಣಿಯಲ್ಲಿ ‘ಮುಗ್ತೆಹೊಳೆಗೆ ತೂಗು ಸೇತುವೆಯೇ ಹೆದ್ದಾರಿ’ ಎನ್ನುವ ಶೀರ್ಷಿಕೆ ಅಡಿ ವಿಶೇಷ ವರದಿ ಮಾಡಿದ್ದನ್ನು ಇಲ್ಲಿ ಗಮನಿಸಬಹುದು.
ಬರಗಾಲ ಪೀಡಿತ ಜಿಲ್ಲೆ ಘೊಷಣೆಗೆ ಮನವಿ
ಸಿದ್ದಾಪುರ- ಕೋಡಿಗದ್ದೆ- ಹೊನ್ನಾವರ- ಹಿರೇಬೈಲ್ ರಸ್ತೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಂಕಾಳು ವೈದ್ಯ, ಈಗಾಗಲೇ ಈ ರಸ್ತೆ ವಿಷಯ ನ್ಯಾಯಾಲಯದಲ್ಲಿದೆ. ನ್ಯಾಯಾಲಯದಲ್ಲಿ ಬಗೆಹರಿದ ನಂತರ ರಸ್ತೆ ಮಾಡುತ್ತೇವೆ. ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಅಂತ ಘೊಷಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಹೊನ್ನಾವರ ಹಾಗೂ ಜೊಯಿಡಾ ತಾಲೂಕುಗಳು ಮಾತ್ರ ಇದರಿಂದ ಹೊರತಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕೂಡ ಸೇರಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.</