ಜಿಲ್ಲೆ

ಕೃಷಿಯೊಂದಿಗೆ ಕೋಳಿ ಸಾಕಣೆ ಮಾಡಿ ಯಶಸ್ವಿಯಾದ ಯುವ ರೈತ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಕೃಷಿಯೊಂದಿಗೆ ಹಲವು ರೈತರ ಕೈಹಿಡಿದಿರುವ ಪ್ರಮುಖ ಉಪಕಸುಬು ಕೋಳಿ ಸಾಕಣೆ. ಇಲ್ಲೊಬ್ಬ ಯುವ ರೈತ ಪರಿಸರ ನಿಯಂತ್ರಣ ಕೋಳಿ ಫಾರಂ (ಇ.ಸಿ. ಪೌಲ್ಟ್ರಿ ಫಾರಂ) ಮಾಡಿ ಬದುಕು ಕಟ್ಟಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ತಾಲೂಕಿನ ತಿಟ್ಟಮಾರನಹಳ್ಳಿಯ ಟಿ.ಪಿ.ರಘುನಂದನ್ ವೈಜ್ಞಾನಿಕ ಮಾದರಿಯಲ್ಲಿ ಕೋಳಿ ಸಾಕಣೆ ಮಾಡಿ ಸೈ ಎನಿಸಿಕೊಂಡಿರುವ ಯುವ ರೈತ. ಪಿಯುಸಿ ಓದಿರುವ ಇವರಿಗೆ ಬಾಲ್ಯದಿಂದಲೂ ಕೃಷಿ ಹಾಗೂ ಇನ್ನಿತರ ಉಪಕಸುಬುಗಳ ಮೇಲೆ ಅಪರಿಮಿತ ಆಸಕ್ತಿ. ಹಲವಾರು ವರ್ಷಗಳಿಂದ ಪಿತ್ರಾರ್ಜಿತ ಆಸ್ತಿಯಲ್ಲಿ ಬಾಳೆ, ಕಬ್ಬು ಸೇರಿ ವಿವಿಧ ಕೃಷಿ ನಡೆಸಿದ್ದಾರೆ. ಆದರೆ, ಇವರ ಕೈಹಿಡಿದದ್ದು ಇ.ಸಿ ಪೌಲ್ಟ್ರಿ ಫಾರಂ.

ಏನಿದು ಇ.ಸಿ. ಪೌಲ್ಟ್ರಿ ಫಾರಂ?

ಸಾಮಾನ್ಯವಾಗಿ ಶೆಡ್ ನಿರ್ಮಿಸಿ ಕೋಳಿ ಸಾಕುವುದು ಎಲ್ಲರಿಗೂ ತಿಳಿದಿದೆ. ಆದರೆ, ಈ ಪರಿಸರ ನಿಯಂತ್ರಣ ಕೋಳಿ ಫಾರಂ (ಇ.ಸಿ ಪೌಲ್ಟ್ರಿ ಫಾರಂ) ವೈಜ್ಞಾನಿಕವಾಗಿ ಕೋಳಿ ಸಾಕುವ ವಿಧಾನವಾಗಿದೆ. ಇದರಲ್ಲಿ ಕೋಳಿಗಳ ಬೆಳವಣಿಗೆಗೆ ಪೂರಕವಾದ ಗಾಳಿ ಹಾಗೂ ಶಾಖವನ್ನು ಯಂತ್ರದ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಕೋಳಿಗಳಿಗೆ ಬೇಕಾದ ಆಹಾರ, ನೀರು ಮತ್ತು ಔಷಧಗಳು ಸ್ವಯಂಚಾಲಿತ ಯಂತ್ರದ ಮೂಲಕ ಪೂರೈಕೆಯಾಗುತ್ತದೆ. ಕಡಿಮೆ ಮಾನವ ಶಕ್ತಿ ಬಳಕೆ ಹಾಗೂ ಹೆಚ್ಚು ಲಾಭ ತಂದುಕೊಡುವುದು ಈ ವಿಧಾನದ ವಿಶೇಷ.

ಸಾಮಾಜಿಕ ಜಾಲತಾಣದ ಮೂಲಕ ಈ ಹೊಸ ಕೋಳಿ ಸಾಕಣೆಯ ವಿಧಾನ ತಿಳಿದ ರಘುನಂದನ್, ತಿಟ್ಟಮಾರನಹಳ್ಳಿ ಹೊರವಲಯದಲ್ಲಿರುವ ಜಮೀನಿನಲ್ಲಿ 2019ರಲ್ಲಿ ಫಾರಂ ಆರಂಭಿಸಿದರು. 350 ಅಡಿ ಉದ್ದ ಹಾಗೂ 40 ಅಡಿ ಅಗಲವಿರುವ 20 ಸಾವಿರ ಕೋಳಿ ಸಾಕುವ ಸಾಮರ್ಥ್ಯದ ಶೆಡ್ ನಿರ್ಮಿಸಿ, ಖಾಸಗಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸುತ್ತಿದ್ದಾರೆ.

ಬಂಡವಾಳವೂ ಅಧಿಕ.., ಲಾಭವೂ ಹೆಚ್ಚು!

ಫಾರಂ ನಿರ್ಮಾಣಕ್ಕೆ ಬಂಡವಾಳ ಸಹ ಅಧಿಕವಾಗಿದೆ. ಅದಕ್ಕೆ ತಕ್ಕಂತೆ ಲಾಭವೂ ಅಧಿಕವಾಗಿದೆ. ಈ ಫಾರಂ ನಿರ್ಮಾಣಕ್ಕೆ ಗರಿಷ್ಠ 70 ಲಕ್ಷ ರೂ.ವರೆಗೆ ಖರ್ಚು ಬೀಳಲಿದೆ. ರೈತ ಶೆಡ್ ನಿರ್ಮಾಣ ಮಾಡಿಕೊಂಡರೆ, ಒಪ್ಪಂದ ಮಾಡಿಕೊಳ್ಳುವ ಖಾಸಗಿ ಕಂಪನಿ ಪರಿಸರ ನಿಯಂತ್ರಣ ಪರಿಕರಗಳ. ಕೋಳಿಮರಿ, ಆಹಾರ ಮತ್ತು ಔಷಧವನ್ನೂ ಒದಗಿಸುತ್ತದೆ. ವರ್ಷಕ್ಕೆ ಆರು ತಂಡಗಳಲ್ಲಿ ಖರೀದಿ ಮಾಡುವ ಜವಾಬ್ದಾರಿ ಸಹ ಕಂಪನಿಯವರೇ ತೆಗೆದುಕೊಳ್ಳುತ್ತಾರೆ.

ಕೋಳಿಗಳನ್ನು ಬೆಳೆಸುವ ಜವಾಬ್ದಾರಿ ಮಾತ್ರ ರೈತನದ್ದಾಗಿರುತ್ತದೆ. ಕೋಳಿಗಳ ಬೆಳವಣಿಗೆ ಹಾಗೂ ಅಂದಿನ ಮಾರುಕಟ್ಟೆ ದರದ ಆಧಾರದ ಮೇಲೆ ರೈತನಿಗೆ ಸಂಸ್ಥೆ ಕೆ.ಜಿ.ಗೆ ಕನಿಷ್ಠ 10ರಿಂದ ಗರಿಷ್ಠ 20 ರೂ.ವರೆಗೆ ಹಣ ನೀಡಿ ಕೋಳಿಗಳನ್ನು ಖರೀದಿಸುತ್ತದೆ.

ರಘುನಂದನ್ ಒಂದು ಬ್ಯಾಚ್‌ಗೆ 4ರಿಂದ 5 ಲಕ್ಷ ರೂ.ಗಳವರೆಗೆ ಗಳಿಸುತ್ತಿದ್ದಾರೆ. ಕೋಳಿ ಶೆಡ್‌ಗೆ ಹಾಕುವ ಜಳ್ಳು, ಒಬ್ಬ ಕಾರ್ಮಿಕನ ವೇತನ, ವಿದ್ಯುತ್ ಮತ್ತು ಡೀಸೆಲ್ ಹಣ ಸೇರಿ 1.25 ಲಕ್ಷ ಖರ್ಚು ಕಳೆದು ವಾರ್ಷಿಕ 18ರಿಂದ 20 ಲಕ್ಷ ರೂ. ಸಂಪಾದಿಸುತ್ತಿದ್ದಾರೆ. ಈ ಉದ್ಯಮಕ್ಕೆ ಸಾಲ ಸೌಲಭ್ಯವೂ ಲಭ್ಯವಿದೆ.

ಮೊದಲಿಗ!

ಜಿಲ್ಲೆಯಷ್ಟೇ ಅಲ್ಲದೇ ಈ ಭಾಗದಲ್ಲಿ ಪರಿಸರ ನಿಯಂತ್ರಣ ಕೋಳಿ ಫಾರಂ ನಿರ್ಮಾಣ ಮಾಡಿದ ಮೊದಲ ರೈತ ಎಂಬ ಹೆಗ್ಗಳಿಕೆಗೂ ರಘುನಂದನ್ ಪಾತ್ರರಾಗಿದ್ದಾರೆ. ಆರಂಭದಲ್ಲಿ ಅಧಿಕ ಬಂಡವಾಳದ ಈ ಕೋಳಿ ಸಾಕಾಣಿಕೆಯ ಬಗ್ಗೆ ಮೂಗು ಮುರಿಯುವರ ಸಂಖ್ಯೆಯೇ ಹೆಚ್ಚಾಗಿತ್ತು. ದಿನಕಳೆದಂತೆ ಈ ಉದ್ಯಮದ ಲಾಭದ ಮಾಹಿತಿ ಪಡೆದ ಹಲವಾರು ಮಂದಿ ಇ.ಸಿ. ಪೌಲ್ಟ್ರಿಫಾರಂ ನಿರ್ಮಿಸುತ್ತಿದ್ದಾರೆ. ಹಲವಾರು ರೈತರಿಗೆ ರಘುನಂದನ್ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಿದ್ದಾರೆ. ಉತ್ತಮ ಇಳುವರಿಗಾಗಿ ಈಗಾಗಲೇ ಎರಡು ಬಾರಿ ಸಂಸ್ಥೆಯ ಗೌರವಕ್ಕೂ ಭಾಜನರಾಗಿದ್ದಾರೆ.

ಹೆಚ್ಚಿನ ಶ್ರಮವಿಲ್ಲದ ಉದ್ಯಮ!

ಈ ವೈಜ್ಞಾನಿಕ ಕೋಳಿ ಸಾಕಣೆಗೆ ಹೆಚ್ಚಿನ ಶ್ರಮದ ಅಗತ್ಯವಿಲ್ಲ. ಮರಿ ಕೊಟ್ಟ 36 ದಿನಕ್ಕೆ ಕಂಪನಿ ಕೋಳಿಗಳನ್ನು ಎತ್ತಿಕೊಳ್ಳುತ್ತದೆ. 20 ದಿನಗಳ ಬಿಡುವಿನ ನಂತರ (ಶೆಡ್ ಒಣಗಲು ಹಾಗೂ ಸ್ವಚ್ಛಗೊಳಿಸಲು) ಮತ್ತೆ ಮರಿಗಳನ್ನು ನೀಡುತ್ತದೆ.

ಕೃಷಿಯೊಂದಿಗೆ ಯಾವುದಾದರೂ ಉದ್ಯಮ ಮಾಡಬೇಕೆಂಬ ಆಸಕ್ತಿ ಇರುವ ಯುವಕರಿಗೆ ಇ.ಸಿ. ಪೌಲ್ಟ್ರಿ ಫಾರಂ ಉತ್ತಮ ಮಾರ್ಗ. ಹಣ ವಾಪಸ್ ಬರುವ ಗ್ಯಾರಂಟಿ ಇಲ್ಲದ ಉದ್ಯಮಕ್ಕೆ ಬಂಡವಾಳ ಹಾಕುವ ಬದಲು, ಕೃಷಿಯೊಟ್ಟಿಗೆ ಹೆಚ್ಚಿನ ಶ್ರಮ ಇಲ್ಲದ ಆಧುನಿಕ ಕೋಳಿ ಸಾಕಣೆ ಉತ್ತಮವಾಗಿದೆ.ಟಿ.ಪಿ.ಪುಟ್ಟಸಿದ್ದೇಗೌಡ, ರಘುನಂದನ್ ತಂದೆ

ಚಿಕ್ಕಂದಿನಿಂದಲೂ ಕೃಷಿಯ ಬಗ್ಗೆ ಆಸಕ್ತಿ ಇತ್ತು. ಕೃಷಿಯೊಂದಿಗೆ ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ಕಲೆಹಾಕುವಾಗ ಕೋಳಿ ಸಾಕಣೆ ಮಾಹಿತಿ ಸಿಕ್ಕಿತು. ತಂದೆಯ ಪ್ರೊತ್ಸಾಹ ಹಾಗೂ ಬ್ಯಾಂಕ್ ಸಾಲ ಸೌಲಭ್ಯದಿಂದ ಇ.ಸಿ. ಫಾರಂ ಆರಂಭ ಮಾಡಿದೆ. ಈ ವಿಧಾನದ ಕೋಳಿ ಸಾಕಣೆಯಿಂದ ಉತ್ತಮ ಲಾಭ ಪಡೆಯುತ್ತಿದ್ದೇನೆ. ಈ ವಿಧಾನದಲ್ಲಿ ರೋಗರುಜಿನ ಹಾಗೂ ನಷ್ಟದ ಭಯವಿಲ್ಲ. ಟಿ.ಪಿ.ರಘುನಂದನ್, ಯುವ ರೈತಸಂಪರ್ಕ ಸಂಖ್ಯೆ ಮತ್ತು ಸಮಯ9663144151ಬೆಳಗ್ಗೆ 10 ಗಂಟೆಯಿಂದ 6ರವರೆಗೆ