ಜಿಲ್ಲೆ

ಮಗುವಿಗೆ ಥೈರಾಯ್ಡ ಕ್ಯಾನ್ಸರ್ ಯಶಸ್ವಿ ಶಸ್ತ್ರಚಿಕಿತ್ಸೆ : ನವೀನ ತಂತ್ರಜ್ಞಾನ ಬಳಕೆ : ಯೇನೆಪೊಯ ಆಂಕಾಲಜಿ ಆಸ್ಪತ್ರೆ ವೈದ್ಯರ ಸಾಧನೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಯೇನೆಪೊಯ ವೈದ್ಯಕೀಯ ಕಾಲೇಜಿನ ಝುಲೇಖಾ ಯೇನೆಪೊಯ ಆಂಕಾಲಜಿ ಸಂಸ್ಥೆಯಲ್ಲಿ ಏಳು ವರ್ಷದ ಬಾಲಕಿಗೆ ಥೈರಾಯ್ಡ ಗ್ರಂಥಿಯ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಬುಧವಾರ ಆಸ್ಪತ್ರೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಝುಲೇಖಾ ಯೇನೆಪೊಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ.ಜಲಾಲುದ್ದೀನ್ ಅಕ್ಬರ್, 30 ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ಮೊದಲ ಬಾರಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪಾಲಕರು ಮಗುವಿನ ಕುತ್ತಿಗೆಯ ಊತ ಗಮನಿಸಿ ಆಸ್ಪತ್ರೆಗೆ ಕರೆತಂದಿದ್ದರು. ಸರಣಿ ಪರೀಕ್ಷೆಗಳ ನಂತರ ಥೈರಾಯ್ಡ ಗ್ರಂಥಿಯ ಪ್ಯಾಪಿಲ್ಲರಿ ಕಾರ್ಸಿನೋಮ ಇರುವುದು ದೃಢವಾಗಿದ್ದು ಕುತ್ತಿಗೆಯ ಮಧ್ಯ ಹಾಗೂ ಎರಡೂ ಭಾಗಕ್ಕೆ ಹರಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅರ್ಬುದ ಶಸ್ತ್ರಚಿಕಿತ್ಸಾ ತಂಡದಲ್ಲಿರುವ ಡಾ.ಎಚ್.ಟಿ.ಅಮರ್ ರಾವ್, ಡಾ.ನೂರ್‌ಮೊಹಮ್ಮದ್, ಅರಿವಳಿಕೆ ತಜ್ಞೆ ಡಾ.ಪ್ರೀತಿ ಜತೆಗೂಡಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದೆವು ಎಂದರು.

ಡಾ.ನೂರ್‌ಮಹಮ್ಮದ್ ಮಾತನಾಡಿ, ಥೈರಾಯ್ಡ ಕ್ಯಾನ್ಸರ್ ಚಿಕಿತ್ಸೆಗಾಗಿ ವಯಸ್ಕರಿಗಿಂತಲೂ ಮಕ್ಕಳ ಶಸ್ತ್ರಚಿಕಿತ್ಸೆ ಮಾಡುವುದು ಸವಾಲು. ಈ ಹಿನ್ನೆಲೆಯಲ್ಲಿ ಮಗುವಿನ ಶಸ್ತ್ರಚಿಕಿತ್ಸೆಗೆ ಒಂಬತ್ತು ಗಂಟೆ ಹಿಡಿದಿದೆ. ಶಸ್ತ್ರಚಿಕಿತ್ಸೆ ನಡೆಸಿದ ಮರುದಿನವೇ ಮಗು ಆರಾಮವಾಗಿತ್ತು. ಸರಿಯಾದ ಸಮಯದಲ್ಲೇ ಮಗುವನ್ನು ಆಸ್ಪತ್ರೆಗೆ ತಂದಿರುವುದರಿಂದ ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.

ಆಸ್ಪತ್ರೆಯ ಅಧೀಕ್ಷಕ ಹಬೀಬ್ ರಹಮಾನ್ ಮಾತನಾಡಿ, ಥೈರಾಯ್ಡ ಕ್ಯಾನ್ಸರ್ ಕಾಯಿಲೆಯನ್ನು ನಿರ್ಧರಿಸಲು ವಿವಿಧ ವಿಭಾಗ, ಶಸ್ತ್ರಚಿಕಿತ್ಸಾ ತಂಡದ ಪರಿಶ್ರಮದಿಂದ ಸಾಧ್ಯವಾಗಿದೆ. ಆಸ್ಪತ್ರೆಯಲ್ಲಿ ನುರಿತ ವೈದ್ಯರು, ಅತ್ಯಾಧುನಿಕ ಮೂಲಸೌಕರ್ಯಗಳಿವೆ. ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ನಿರಂತರ ನಡೆಸಲಾಗುತ್ತಿದೆ ಎಂದರು.

ಡಾ.ಎಚ್.ಟಿ.ಅಮರ್ ರಾವ್, ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್, ಮಕ್ಕಳ ವಿಭಾಗದ ಡಾ.ಅನಿತಾ ಪ್ರಭು, ಶುಶ್ರೂಷಾ ವಿಭಾಗದ ಅಧೀಕ್ಷಕಿ ಸತ್ಯವತಿ ದೇವಿ, ಸಹಾಯಕ ವೈದ್ಯಕೀಯ ನಿರ್ದೇಶಕ ಡಾ.ಬೋನಿ ಪೌಲ್, ಮೊಹಮ್ಮದ್ ಸಾಬಿತ್ ಉಪಸ್ಥಿತರಿದ್ದರು.

ಆಯುಷ್ಮಾನ್ ವ್ಯವಸ್ಥೆಯಡಿ ಚಿಕಿತ್ಸೆ

ಪ್ಯಾರಥೈರಾಯ್ಡಾ ಕ್ಯಾನ್ಸರ್ ಎನ್ನುವುದು ಜಟಿಲ ಸಮಸ್ಯೆಯಾಗಿದ್ದು, ಕುತ್ತಿಗೆಯಲ್ಲಿ ಹರಡಿದ್ದರಿಂದ ನರಗಳನ್ನು ಉಳಿಸಿಕೊಳ್ಳಬೇಕಿತ್ತು. ಅಲ್ಲದೆ ಧ್ವನಿ ಪೆಟ್ಟಿಗೆಯ ನರ ಉಳಿಸಬೇಕಿದ್ದರಿಂದ ಈ ಶಸ್ತ್ರಚಿಕಿತ್ಸೆ ಸವಾಲಾಗಿತ್ತು. ಭುಜದ ನರ ಉಳಿಸದಿದ್ದರೆ ಕತ್ತು ಅಲ್ಲಾಡಿಸುವ ಸಮಸ್ಯೆ ಬರುವ ಕಾರಣ ಈ ಎಲ್ಲ ಸವಾಲನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಿತ್ತು. ಈ ವಿಷಯಗಳ ಬಗ್ಗೆ ಚರ್ಚಿಸಿದ ಬಳಿಕ ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ಯಂತ್ರ ಬಳಸಿ ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪ್ರಸ್ತುತ ಮಗು ಶೇ.99 ಗುಣಮುಖವಾಗಿದ್ದು, ರೇಡಿಯೋ ಅಯೋಡಿನ್ ಎನ್ನುವ ಇನ್ನೊಂದು ಚಿಕಿತ್ಸೆ ಬಳಿಕ ಸಂಪೂರ್ಣ ಗುಣವಾಗಿರುವ ಬಗ್ಗೆ ತೀರ್ಮಾನಿಸಲಾಗುತ್ತದೆ. ಈ ಚಿಕಿತ್ಸೆಯ ಬಳಿಕ ಮಗು ಮುಂದಿನ ದಿನಗಳಲ್ಲಿ ಶೇ.100ರಷ್ಟು ಸಾಮಾನ್ಯ ಜೀವನ ನಡೆಸಬಹುದು. ಈ ಚಿಕಿತ್ಸೆಗೆ 2ರಿಂದ 3 ಲಕ್ಷ ರೂ. ಖರ್ಚಿದೆ. ಆದರೆ ಮಗುವಿಗೆ ಆಯುಷ್ಮಾನ್ ವ್ಯವಸ್ಥೆಯಡಿ ಚಿಕಿತ್ಸೆ ನೀಡಲಾಗಿದೆ ಎಂದು ಡಾ.ಜಲಾಲುದ್ದೀನ್ ಅಕ್ಬರ್ ತಿಳಿಸಿದರು.

9ನೇ ತರಗತಿಯಲ್ಲಿದ್ದಾಗ ಕುತ್ತಿಗೆಯಲ್ಲಿ ಗುಳ್ಳೆ ಇತ್ತು. ಆಗ ಕೇವಲ 15 ವರ್ಷ ಪ್ರಾಯ. ಭಯಪಟ್ಟು ಜೀವನ ಮುಗಿಯಿತು ಎಂದು ಭಾವಿಸಿದ್ದೆ. ಡಾ.ಜಲಾಲುದ್ದೀನ್ ಅವರ ತಂಡ ಎಂಟೂವರೆ ಗಂಟೆ ಸರ್ಜರಿ ನಡೆಸಿದ್ದರು. ಈಗ ಮದುವೆಯಾಗಿ ಹತ್ತು ವರ್ಷ ಆಗಿದೆ. ಸಾಮಾನ್ಯರಂತೆ ಇದ್ದೇನೆ. ನಾನೊಬ್ಬ ಕ್ಯಾನ್ಸರ್ ರೋಗಿ ಆಗಿದ್ದೆ ಎಂದು ಯಾರಿಗೂ ಗೊತ್ತಾಗಿಲ್ಲ. ವೈದ್ಯರ ಮೇಲೆ ನಂಬಿಕೆ ಇರಲಿ. ಈ ಮಗು ಮುಂದಕ್ಕೆ ವೈದ್ಯೆಯಾಗಿ ಬರಲಿ. ಜಸೆಲ್ ಡಿಸೋಜ ಥೈರಾಯ್ಡ ಕ್ಯಾನ್ಸರ್ ಸಂತ್ರಸ್ತೆ ಎರಡು ತಿಂಗಳ ಹಿಂದೆ ಕಿವಿಯ ಕೆಳಭಾಗದಲ್ಲಿ ಗುಳ್ಳೆ ಕಂಡುಬಂದಿತ್ತು. ವೈದ್ಯರು ಔಷಧ ಕೊಟ್ಟು ಇಎನ್‌ಟಿ ಬಳಿ ಹೋಗಲು ಹೇಳಿದರು. ಇಲ್ಲಿಗೆ ಬರುವಾಗ ತುಂಬಾ ಹೆದರಿದ್ದೆವು. ಕಳೆದ ತಿಂಗಳು ಶಸ್ತ್ರಚಿಕಿತ್ಸೆ ಆಗುವಾಗ ನಾವು ಹೊರಗೆ ಕುಳಿತು ಅಳುತ್ತಿದ್ದೆವು. ಈಗ ಮಗು ಸಾಮಾನ್ಯ ಸ್ಥಿತಿಗೆ ಮರಳಿದ್ದು ತುಂಬಾ ಖುಷಿಯಲ್ಲಿದ್ದೇವೆ. ಅಬ್ದುಲ್ ನಾಸಿರ್ ಕಡಬ ಮಗುವಿನ ತಂದೆ https://www.vijayavani.net/bhajana-training https://www.vijayavani.net/national-workshop