ಬೆಳಗಾವಿ: ಕ್ಯಾಲ್ಸಿಫಿಕ್ಸ್ ಪ್ಯಾಂಕ್ರಿಯಾಟೈಟಿಸ್ ರೋಗದಿಂದ ಬಳಲುತ್ತಿದ್ದ ಯುವಕನಿಗೆ ಕೆಎಲ್‌ಇ ಆಸ್ಪತ್ರೆ ವೈದ್ಯರು ರೋಬೋಟಿಕ್ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ, ಮೇದೋಜೀರಕ ಗ್ರಂಥಿಯ (ಲ್ಯಾಟರಲ್ ಪ್ಯಾಂಕ್ರಿಯಾಟಿ ಕೋಜೆಜುನೋಸ್ಟೊಮಿ) ಮೇಲಿದ್ದ ಹರಳುಗಳನ್ನು ತೆಗೆದು, ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಎರಡು ವರ್ಷಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬೈಲಹೊಂಗಲ ತಾಲೂಕಿನ ಹಳ್ಳಿಯೊಂದರ 32 ವರ್ಷದ ಯುವಕನೋರ್ವ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ್ದ. ತಪಾಸಣೆ ಮಾಡಿದಾಗ ದೀರ್ಘಕಾಲದಿಂದ ‘ಕ್ಯಾಲ್ಸಿಫಿಕ್ ಪ್ಯಾಂಕ್ರಿಯಾಟೈಟಿಸ್’ ರೋಗದಿಂದ ಬಳಲುತ್ತಿರುವುದು ಗೊತ್ತಾಯಿತು. ಮೇದೋಜೀರಕ ಗ್ರಂಥಿಯ ನಾಳದಲ್ಲಿ ಹರಳುಗಳು ಪತ್ತೆಯಾದವು. ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವದು ಅತ್ಯಂತ ಕ್ಲಿಷ್ಟಕರವಾಗಿತ್ತು. ಅನ್ನನಾಳ ಮತ್ತು ಮೇದೋಜೀರಕ ಗ್ರಂಥಿಯ ನಳಿಕೆಯಲ್ಲಿ ಸುಮಾರು 2 ಸೆ.ಮೀ.ರಷ್ಟು ದೊಡ್ಡದಾದ 3 ಹರಳುಗಳಿದ್ದವು. ಅವುಗಳನ್ನು 0.5 ಸೆ.ಮೀ.ನಷ್ಟು ತುಂಡರಿಸಿ, ಸುಮಾರು 7 ಗಂಟೆಗಳ ಕಾಲ ನಿರಂತರವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿ ಹರಳುಗಳನ್ನು ಹೊರತೆಗೆಯಲಾಯಿತು. ಅತ್ಯಂತ ಸಂಕೀರ್ಣವಾಗಿದ್ದ ಶಸ್ತ್ರಚಕಿತ್ಸೆಯನ್ನು ರೋಬೋಟಿಕ್ ಮೂಲಕ ನೆರವೇರಿಸಲಾಗಿದೆ. ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸರ್ಜಿಕಲ್ ಗ್ಯಾಸ್ಟ್ರೋಎಂಟ್ರಾಲಾಜಿ ವಿಭಾಗದ ಡಾ. ಸುದರ್ಶನ ಚೌಗಲಾ ಹಾಗೂ ಅವರ ತಂಡ ಈ ಶಸ್ತ್ರ ಚಿಕಿತ್ಸೆಯಲ್ಲಿ ಯಶಸ್ವಿಯಾಗಿದೆ. ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಇದನ್ನು ನೆರವೇರಿಸಲಾಗಿದೆ.
ಇದು ಔಷಧಿಗಳಿಂದ ಕಡಿಮೆಯಾಗದ ಕಾರಣ ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ. ಪ್ಯಾಂಕ್ರಿಯಾಟಿಕ್ನ್ ಹರಳುಗಳನ್ನು ಹೊರತೆಗೆದು, ಸಣ್ಣ ಕರುಳು ಹಾಗೂ ಮೇದೋಜೀರಕ ಗ್ರಂಥಿಯ ನಾಳವನ್ನು ಜೋಡಿಸಲಾಗುತ್ತದೆ. ಅತ್ಯಂತ ಆಯಕಟ್ಟಿನ ಸ್ಥಳದಲ್ಲಿರುವ ಪ್ಯಾನಕ್ರಿಯ ಸುತ್ತ ವಿವಿಧ ಅಂಗಗಳಿಗೆ ರಕ್ತನಾಳಗಳು ಅಂಟಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆಯು ಅತ್ಯಂತ ಕಠಿಣ ಮತ್ತು ಸವಾಲಿನ ಕಾರ್ಯವಾಗಿತ್ತು. ಸಾಮಾನ್ಯ ಶಸ್ತ್ರಚಿಕಿತ್ಸೆ ನೆರವೇರಿಸಿದರೆ ದೊಡ್ಡ ಕರಳುನ್ನು ಕತ್ತರಿಸಬೇಕಾಗುತ್ತಿತ್ತು. ಇದರಿಂದ ರೋಗಿಯು ಚೇತರಿಸಿಕೊಳ್ಳುವುದು ತೀವ್ರ ವಿಳಂಬವಾಗಿ ಗಾಯದ ಸೋಂಕು ಮತ್ತು ಆಹಾರ ತೆಗೆದುಕೊಳ್ಳುವಲ್ಲಿ ವಿಳಂಬವಾಗಿ ಮತ್ತೆ ಬೇರೆ ತೊಂದರೆಯುಂಟಾಗಿ ಮತ್ತೆ ಶಸ್ತ್ರಚಿಕಿತ್ಸೆಗೊಳಗಾಗುವ ಅಪಾಯವಿತ್ತು. ಆದ್ದರಿಂದ ಈ ಎಲ್ಲ ತೊಂದರೆಗಳನ್ನು ತಪ್ಪಿಸಲು ರೋಬೋಟಿಕ್ ಮೂಲಕ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು ಎಂದು ಡಾ. ಸುದರ್ಶನ ಅವರು ಹೇಳಿದ್ದಾರೆ.
ರೋಬೋಟಿಕ್ ಸರ್ಜನ್, ಅಡ್ವಾನ್ಸ್ಡ್ ಲ್ಯಾಪ್‌ರೊಸ್ಕೋಪಿಕ್ ಶಸ್ತ್ರಚಿಕಿತ್ಸಕ ಡಾ.ಸುದರ್ಶನ ಚೌಗಲೆ ಅವರಿಗೆ, ಜಿಐ ಶಸ್ತ್ರಚಿಕಿತ್ಸಕ ಡಾ.ಕಿರಣ ಉರಬಿನಹಟ್ಟಿ, ಡಾ. ಕಾನಿಷ್ಕಾ ದಾಸ್, ಅರವಳಿಕೆ ತಜ್ಞವೈದ್ಯ ಡಾ. ರಾಜೇಶ ಮಾನೆ, ಡಾ. ಗುರುಪ್ರಸಾದ ಅವರು ಸಹಕರಿಸಿದರು.ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಡಾ ಎಂ. ದಯಾನಂದ ಅವರು ಅಭಿನಂದಿಸಿದ್ದಾರೆ.