ಜಿಲ್ಲೆ

ಕಿಡ್ನಿ ಸಮಸ್ಯೆಗೆ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಲ್ಯಾಪರೊಸ್ಕೋಪಿಕ್ ಶಸ್ತ್ರ ಚಿಕಿತ್ಸೆ

ಮೈಸೂರು: ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದ 3 ತಿಂಗಳ ಗಂಡು ಮಗು ಮತ್ತು 50 ವರ್ಷದ ಇನಾಯತ್ ಪಾಷಾ ಅವರಿಗೆ ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸುಧಾರಿತ ಲ್ಯಾಪರೊಸ್ಕೋಪಿಕ್ ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ ಡಾ.ಎಂ.ಎನ್. ರವಿ ಹೇಳಿದರು.

ಮಗುವಿನ ಎರಡೂ ಕಿಡ್ನಿಗಳಲ್ಲಿ ಅಡಚಣೆ ಕಂಡು ಬಂದಿತ್ತು. ಇನಾಯತ್ ಪಾಷಾ ಅವರ ಬಲ ಮೂತ್ರಪಿಂಡದಲ್ಲಿ ದೊಡ್ಡ ಕ್ಯಾನ್ಸರ್ ಗಡ್ಡೆ ಬೆಳೆದಿತ್ತು. ವೈದ್ಯರು ಸುಧಾರಿತ ಲ್ಯಾಪರೊಸ್ಕೋಪಿಕ್ ಮೂತ್ರಶಾಸ್ತ್ರೀಯ ಕಾರ್ಯವಿಧಾನ ಬಳಸಿ ರೋಗಿಗಳ ಸಂಕೀರ್ಣ ಮೂತ್ರಶಾಸ್ತ್ರ ಸಂಬಂಧಿತ ರೋಗಗಳಿಗೆ ಶಶ್ತ್ರ ಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾದರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹುಟ್ಟುವಾಗಲೇ ಮಗುವಿನ ಎರಡೂ ಕಿಡ್ನಿಗಳಲ್ಲಿ ಬ್ಲಾಕೇಜ್ ಇತ್ತು. ಸರಣಿ ಅಲ್ಟ್ರಾಸೌಂಡ್ ಸ್ಕಾೃನ್‌ಗಳನ್ನು ನಡೆಸಿದಾಗ ಮಗುವಿನ ಸ್ಥಿತಿ ಹದಗೆಡುತ್ತಿರುವುದು ಖಾತ್ರಿಯಾಯಿತು. ನಂತರ ಕನ್ಸಲ್ಟೆಂಟ್ ಯುರಾಲಜಿಸ್ಟ್ ಡಾ.ಎಸ್. ನಾಗೇಶ್ ನೇತೃತ್ವದಲ್ಲಿ ಸುಧಾರಿತ ಲ್ಯಾಪರೊಸ್ಕೋಪಿಕ್ ಮೂಲಕ ಸತತ 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮೈಸೂರು ಭಾಗದಲ್ಲಿ ಲ್ಯಾಪರೊಸ್ಕೋಪಿಕ್ ಚಿಕಿತ್ಸೆ ಪಡೆದ ಅತ್ಯಂತ ಕಿರಿಯ ಮಗು ಇದಾಗಿದೆ ಎಂದರು.

ಇನಾಯತ್ ಪಾಷಾ ಅವರ ಹೊಟ್ಟೆಯ ಬಲಭಾಗದಲ್ಲಿ ನೋವಿನಿಂದ ಬಳಲುತ್ತಿದ್ದ ಕಾರಣ ಅವರನ್ನು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು. ರೋಗನಿರ್ಣಯದ ನಂತರ ಅವರು ಬಲ ಮೂತ್ರಪಿಂಡದಲ್ಲಿ ದೊಡ್ಡ ಕ್ಯಾನ್ಸರ್ ಗಡ್ಡೆ ಬೆಳೆದಿರು ವುದು ಕಂಡು ಬಂತು. ದೊಡ್ಡ ತೆರೆದ ಶಸ್ತ್ರಚಿಕಿತ್ಸೆ ತಪ್ಪಿಸಲು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಬಳಸಲಾಯಿತು. 5 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ರೋಗಿ ಗುಣಮುಖರಾಗಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲಿ ಸಮಾಲೋಚಕ ಮೂತ್ರಶಾಸ್ತ್ರಜ್ಞ ಡಾ. ಎಸ್. ನಾಗೇಶ್, ಸಮಾಲೋಚಕ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಎಚ್.ಎಂ. ಲೋಕೇಶ್, ಅರಿವಳಿಕೆ ತಂಡದ ಡಾ ಪ್ರಸನ್ನ, ಡಾ. ರಾಮಕೃಷ್ಣ, ಡಾ ರಾಘವ್, ಡಾ. ಶ್ರೀನಿವಾಸ್, ಡಾ.ವಾಣಿ ಅವರ ಪರಿಶ್ರಮ ಅಪಾರವಾದದ್ದು ಎಂದರು.

ಕನ್ಸಲ್ಟೆಂಟ್ ಮೂತ್ರಶಾಸ್ತ್ರಜ್ಞ ಡಾ. ಎಸ್. ನಾಗೇಶ್ ಮಾತನಾಡಿ, ಈ ರೀತಿಯ ಸಂಕೀರ್ಣ ವೈದ್ಯಕೀಯ ಸಮಸ್ಯೆಗಳಿಗೆ ನಗರಗಳಲ್ಲಿ ರೋಬೋಟಿಕ್ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ರೊಬೊಟಿಕ್ ಸೌಲಭ್ಯವು ಪ್ರಸ್ತುತ ಮೈಸೂರಿನಲ್ಲಿ ಲಭ್ಯವಿಲ್ಲದ ಕಾರಣ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಅತ್ಯುತ್ತಮ ಪರ್ಯಾಯವಾಗಿತ್ತು. ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಮ್ಮ ಆಸ್ಪತ್ರೆಯ ನುರಿತ ಶಸ್ತ್ರಚಿಕಿ ತ್ಸಕರು, ಅರಿವಳಿಕೆ ತಜ್ಞರು ಮತ್ತು ಸಿಬ್ಬಂದಿ ನೆರವಿನಿಂದ ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲಾಯಿತು ಎಂದರು. ಸುದ್ದಿಗೋಷ್ಠಿಯಲ್ಲಿ ಅರಿವಳಿಕೆ ತಜ್ಞ ಡಾ. ಪ್ರಸನ್ನ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕೆ.ವಿ. ಕಾಮತ್ ಇದ್ದರು.