ಆರ್.ಕೃಷ್ಣ, ಮೈಸೂರು
ಮಕ್ಕಳಿಲ್ಲದ ದಂಪತಿ ದತ್ತು ಪಡೆಯಲು ನೆರೆ ಜಿಲ್ಲೆ ಆಶ್ರಯಿಸುವುದನ್ನು ತಪ್ಪಿಸಿದ್ದು, ಸರ್ಕಾರ ನಗರದಲ್ಲೇ ದತ್ತು ಕೇಂದ್ರ ಆರಂಭಿಸಿದೆ.
ಈ ಹಿಂದೆ ಖಾಸಗಿ ಸಂಸ್ಥೆಗಳು ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆ ನಡೆಸುತ್ತಿದ್ದರೂ, ನಾನಾ ಕಾರಣದಿಂದ ಕಾರ್ಯ ನಿಲ್ಲಿಸಿದ್ದವು. ಹೀಗಾಗಿ, ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆಗಾಗಿ ನೆರೆಯ ಮಂಡ್ಯ, ಚಾಮರಾಜನಗರಕ್ಕೆ ದಂಪತಿ ತೆರಳುವ ಸ್ಥಿತಿ ಉಂಟಾಗಿತ್ತು. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ಅನಾಥ ಮತ್ತು ಪರಿತ್ಯಕ್ತ ಮಕ್ಕಳ ದತ್ತು ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆತಿದೆ. ಸರ್ಕಾರಿ ವಿಶೇಷ ದತ್ತು ಸಂಸ್ಥೆಯೊಂದಿಗೆ ಖಾಸಗಿ ಸ್ವಯಂ ಸೇವಾ ಸಂಸ್ಥೆ ಮೂಲಕ ಪರಿತ್ಯಕ್ತ ಮಕ್ಕಳನ್ನು ಮಕ್ಕಳಿಲ್ಲದ ಪಾಲಕರ ಮಡಿಲು ಸೇರಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ.
ಒಂದು ವರ್ಷದಲ್ಲಿ 10 ಮಕ್ಕಳನ್ನು ಆಸಕ್ತ ಪಾಲಕರಿಗೆ ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದತ್ತು ನೀಡಿದೆ. ಇನ್ನೂ ನಾಲ್ಕು ಮಕ್ಕಳನ್ನು ದತ್ತು ನೀಡುವ ಪ್ರಕ್ರಿಯೆ ನಡೆಸುತ್ತಿದೆ.
ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಅನಾಥ ಮತ್ತು ಪರಿತ್ಯಕ್ತ ಮಕ್ಕಳನ್ನು ರಕ್ಷಣೆ ಮಾಡುತ್ತಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ದತ್ತು ನೀಡಬಹುದಾದ ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗೆ ನೀಡುವ ಮೂಲಕ ಮಕ್ಕಳಿಲ್ಲ ಎನ್ನುವ ಅವರ ಕೊರಗನ್ನು ನಿವಾರಣೆ ಮಾಡುತ್ತಿದೆ. ಇದರೊಂದಿಗೆ, ಪಾಲಕರಿಲ್ಲದ ಅದೆಷ್ಟೋ ಮಕ್ಕಳಿಗೆ ಪಾಲಕರು ದೊರೆಕಿದಂತಾಗುತ್ತಿದೆ.
ಈ ಹಿಂದೆ ಗೋಕುಲಂನಲ್ಲಿರುವ ‘ಬಾಪೂಜಿ ಚಿಲ್ಡ್ರನ್ ಹೋಂ’ ಸ್ವಯಂ ಸೇವಾ ಸಂಸ್ಥೆ ಮೂಲಕ ಸರ್ಕಾರ ದತ್ತು ನೀಡುವ ಪ್ರಕ್ರಿಯೆ ನಡೆಸುತ್ತಿತ್ತು. ಆದರೆ 2017ರಲ್ಲಿ ಬಾಪೂಜಿ ಚಿಲ್ಡ್ರನ್ ಹೋಂನಲ್ಲಿ ದತ್ತು ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಅಂತಹ ಮಕ್ಕಳನ್ನು ಮಂಡ್ಯ, ಚಾಮರಾಜನಗರದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ದತ್ತು ಸಂಸ್ಥೆಗಳಿಗೆ ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಳುಹಿಸಿ, ಆ ಕೇಂದ್ರಗಳಲ್ಲಿ ಪೋಷಣೆಗೆ ಅವಕಾಶ ಕಲ್ಪಿಸಿ, ಆ ಸಂಸ್ಥೆಗಳ ಮೂಲಕ ಮಕ್ಕಳನ್ನು ದತ್ತು ನೀಡಲಾಗುತ್ತಿತ್ತು.
2022ರ ನವೆಂಬರ್‌ನಲ್ಲಿ ಛಾಯಾದೇವಿ ಸ್ವಯಂ ಸೇವಾ ಸಂಸ್ಥೆಯಲ್ಲಿ ವಿಶೇಷ ದತ್ತು ಸಂಸ್ಥೆ ಆರಂಭಗೊಂಡಿತು. ಅಲ್ಲದೆ, 2023ರ ಜುಲೈನಲ್ಲಿ ಸರ್ಕಾರಿ ವಿಶೇಷ ದತ್ತು ಸಂಸ್ಥೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕವೇ ಆರಂಭಿಸಿದ್ದರಿಂದ ಈಗ ಎರಡು ಕೇಂದ್ರಗಳು ದತ್ತು ನೀಡುವ ಪ್ರಕ್ರಿಯೆ ನಡೆಸುತ್ತಿವೆ.
2022ರ ನವೆಂಬರ್‌ನಿಂದ ಇದುವರೆಗೂ ಛಾಯಾದೇವಿ ಸರ್ಕಾರೇತರ ವಿಶೇಷ ದತ್ತು ಸಂಸ್ಥೆಯ ಮೂಲಕ 10 ಮಕ್ಕಳನ್ನು ದತ್ತು ನೀಡಲಾಗಿದ್ದು, ಅದರಲ್ಲಿ 9 ಮಕ್ಕಳನ್ನು ನೆರೆ ರಾಜ್ಯಗಳಲ್ಲಿನ ಅರ್ಹ ಪಾಲಕರು ದತ್ತು ಪಡೆದಿದ್ದಾರೆ. ಇನ್ನೊಂದು ಮಗುವನ್ನು ವಿದೇಶದಲ್ಲಿರುವ ಪಾಲಕರಿಗೆ ನೀಡಲಾಗಿದೆ.
ಕಾನೂನು ಪ್ರಕಾರವೇ ದತ್ತು ನೀಡುವಿಕೆ
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಕಲ್ಯಾಣ ಸಮಿತಿ 6 ವರ್ಷ ಮೇಲ್ಪಟ್ಟ ದತ್ತು ನೀಡಲು ಸಾಧ್ಯವಾಗುವ ಮಗುವನ್ನು ಬಾಲನ್ಯಾಯ ಕಾಯ್ದೆ-2015, ನಿಯಮಗಳು-2016, ತಿದ್ದುಪಡಿ ಕಾಯ್ದೆ-2021 ಮತ್ತು ನಿಯಮಗಳು- 2022 ಹಾಗೂ ಸಾಕು ಪೋಷಕತ್ವ ಮಾರ್ಗಸೂಚಿ-2016 ಅನ್ವಯ ಪಾಲನೆಗಾಗಿ ಅರ್ಹ ಪಾಲಕರನ್ನು ಗುರುತಿಸುತ್ತದೆ.
ಅಲ್ಲದೆ, ಕೌಟುಂಬಿಕ ವಾತಾವರಣವನ್ನು ಗಮನಿಸಿ, ಮಕ್ಕಳನ್ನು ದತ್ತು ಪಡೆಯುವ ದಂಪತಿಯನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿದ ಬಳಿಕ ದತ್ತು ಪ್ರಕ್ರಿಯೆ ನಡೆಸಲಾಗುತ್ತದೆ.
ಮಕ್ಕಳನ್ನು ದತ್ತು ಪಡೆಯಲು ಬಯಸುವ ಪಾಲಕರು ಡಿಡಿಡಿ.್ಚಚ್ಟ.್ಞಜ್ಚಿ.ಜ್ಞಿ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ನೋಂದಣಿ ಸಮಯದಲ್ಲಿ ಪಾಲಕರು ತಮಗೆ ಸಮೀಪ ಮತ್ತು ಅನುಕೂಲಕರವಾಗಿರುವ ವಿಶೇಷ ದತ್ತು ಕೇಂ ದ್ರವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಪಾನ್‌ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಾಸಸ್ಥಳ ದೃಢೀಕರಣ, ಮದುವೆ ನೋಂದಣಿ ಪ್ರಮಾಣಪತ್ರ, ಭಾವಚಿತ್ರ ಇತ್ಯಾದಿ ದಾಖಲಾತಿಗಳನ್ನು ಪರಿಶೀಲನೆಗೆ ಸಲ್ಲಿಸಬೇಕು. ಪಾಲಕರು ತಮ್ಮ ಹೋಂ ಸ್ಟಡಿ ರಿಪೋರ್ಟ್(ಎಚ್‌ಎಸ್‌ಆರ್) ನೀಡಬೇಕು.
ವೆಬ್‌ಸೈಟ್‌ನಲ್ಲಿ ನೋಂದಣಿಯಾದ ಪಟ್ಟಿ ಹಿರಿತನದ ಮೇಲೆ ಮಗುವನ್ನು ಆಯ್ಕೆ ಮಾಡಿಕೊಳ್ಳಲು ದಂಪತಿಗೆ ಅವಕಾಶ ನೀಡಲಾಗುತ್ತದೆ. ಕೇಂದ್ರದಲ್ಲಿ ಲಭ್ಯ ಇರುವ ಮಕ್ಕಳಲ್ಲಿ ಒಂದು ಮಗುವನ್ನು ಆಯ್ಕೆ ಮಾಡಿ 15 ದಿನದಲ್ಲಿ ಒಪ್ಪಿಗೆ ನೀಡಬೇಕಾಗುತ್ತದೆ. ಮಗುವನ್ನು ಒಪ್ಪಿಕೊಂಡ 10 ದಿನದಲ್ಲಿ ದತ್ತು ಪೂರ್ವ ಪೋಷಕತ್ವವನ್ನು ನೀಡಲಾಗುತ್ತದೆ. ದತ್ತು ಪೋಷಕತ್ವ ನೀಡಿದ ನಂತರ 7 ದಿನದಲ್ಲಿ ವಿಶೇಷ ದತ್ತು ಕೇಂದ್ರವು ನ್ಯಾಯಾಲಯದ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಿ ದತ್ತು ಆದೇಶ ನೀಡುತ್ತದೆ.
ಸರ್ಕಾರದ ದತ್ತು ಕಾರ್ಯಕ್ರಮದಿಂದ ಮಕ್ಕಳಿಲ್ಲ ಎಂದು ಕೊರಗುವ ದಂಪತಿ ನೋವನ್ನು ನಿವಾರಣೆ ಮಾಡಿದಂತಾಗಿದೆ. ಅಲ್ಲದೆ, ಅನಾಥವಾಗುತ್ತಿದ್ದ ಮಕ್ಕಳನ್ನು ಪಾಲಕರಿಗೆ ಒಪ್ಪಿಸಿ ಅವರ ಲಾಲನೆ, ಪಾಲನೆಗೂ ಜವಾಬ್ದಾರಿ ದೊರೆತಂತೆ ಆಗುತ್ತದೆ. ಇದರಿಂದ ಇಬ್ಬರಿಗೂ ಪ್ರೀತಿ ದೊರೆತಂತೆ ಆಗುತ್ತದೆ.
ಎನ್.ಟಿ.ಯೋಗೇಶ್
ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ