ನಂಜನಗೂಡು: ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಗುರು-ಹಿರಿಯರ ಆಶೀರ್ವಾದ, ಮಾರ್ಗದರ್ಶನ ಬಹುಮುಖ್ಯ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ನಗರದ ಜೆಎಸ್‌ಎಸ್ ಕಲ್ಯಾಣ ಮಂಟಪದಲ್ಲಿ ಗುರುವಾರ ಸುತ್ತೂರು ಶ್ರೀ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಶತ್ತೋತ್ತರ ದಶಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀಮಠವು ಅಗಾಧವಾಗಿ ವಿಸ್ತಾರವಾಗಲು ಜಗದ್ಗುರುಗಳ ದೂರದೃಷ್ಟಿಯೇ ಕಾರಣ. ರಾಜ್ಯವಲ್ಲದೇ ರಾಷ್ಟ್ರ ಹಾಗೂ ವಿದೇಶಗಳಲ್ಲೂ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಸುತ್ತೂರು ಮಠವು ಅಕ್ಷರ, ಅನ್ನ,ಆರೋಗ್ಯವನ್ನು ಬಸವಣ್ಣನವರ ತತ್ವದಡಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ಮಾಜಿ ಶಾಸಕ ಹರ್ಷವರ್ದನ್ ಮಾತನಾಡಿ, ಒಂದು ದೇಶದ ಪ್ರಗತಿ ಆ ದೇಶದ ಶಿಕ್ಷಣ, ಸಂಶೋಧನೆ ಮೇಲೆ ಅವಲಂಬಿಸಿದೆ ಎಂದು ಅರಿವಿದ್ದ ರಾಜೇಂದ್ರಶ್ರೀಗಳು ಅಕ್ಷರ, ಅನ್ನ ಮತ್ತು ಆರೋಗ್ಯಕ್ಕೆ ಒತ್ತು ನೀಡಿದರು. ಮಾತೃ ಹೃದಯಿಯಾಗಿದ್ದ ಅವರು ಅಸ್ಪೃಶ್ಯ ರೊಂದಿಗೆ ಉಪಹಾರ ಸೇವಿಸುವ ಮೂಲಕ ಬಸವಣ್ಣನವರ ಸಮಾನತೆಯನ್ನು ಎತ್ತಿ ಹಿಡಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ರಾಜೇಂದ್ರಶ್ರೀಗಳು ಕರ್ನಾಟಕದ ಎಲ್ಲ ಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ನೆರವಾದವರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಅವರು, ಶ್ರೀಮಠದಲ್ಲಿ ಯಾವುದೇ ಕುಂದುಕೊರತೆ ಬರದಂತೆ ಮಠವನ್ನು ವಿಸ್ತರಿಸಿದರು. ಸಾಮಾಜಿಕ, ಶೈಕ್ಷಣಿಕ ಧಾರ್ಮಿಕ ಆದ್ಯಾತ್ಮಿಕ ಕಾರ್ಯಗಳನ್ನು ಕೈಗೆತ್ತಿಕೊಂಡು ಬಡವರು ದೀನದಲಿತರ ಕಲ್ಯಾಣಕ್ಕಾಗಿ ಹಲವು ಅವಕಾಶಗಳನ್ನು ಒದಗಿಸಿದರು. ಸ್ವಾರ್ಥ ಹಾಗೂ ಅಸೂಯೆಗಳಿಲ್ಲದೇ ಸೇವಾಪರ ಚಿಂತನೆಯ ಪ್ರತಿಕವಾಗಿ ಇಂದು ಜಗತ್ತಿನಾದ್ಯಂತ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತ ಜಿ.ಮಂಜೇಶ್ ಕುಮಾರ್ ಅವರನ್ನು ಗೌರವಿಸಲಾಯಿತು. ಧಾರ್ಮಿಕ ಸಭೆಗೂ ಮುನ್ನ ಶ್ರೀ ಡಾ.ರಾಜೇಂದ್ರ ಸ್ವಾಮಿಗಳ ಅಲಂಕೃತ ಪುತ್ಥಳಿಯನ್ನು ಸಾರೋಟಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ವಿವಿದ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ದೇವನೂರು ಮಠದ ಶ್ರೀ ಮಹಾಂತ ಸ್ವಾಮಿಗಳು, ಶ್ರೀ ಇಮ್ಮಡಿ ಸಿದ್ದಲಿಂಗ ಸ್ವಾಮಿಗಳು, ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ,ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅದ್ಯಕ್ಷ ಎಸ್.ಎಂ.ಕೆಂಪಣ್ಣ, ಪ್ರಾಂಶುಪಾಲ ಡಾ.ಹೊನ್ನೆಗೌಡ, ಪ್ರಭು ಪ್ರಸಾದ್, ನರಸಿಂಹಸ್ವಾಮಿ, ಮಹದೇವಸ್ವಾಮಿ, ಯು.ಎನ್.ಪದ್ಮನಾಭರಾವ್, ಬಸವರಾಜು, ಎಸ್. ಮಹದೇವಯ್ಯ, ಕೃಷ್ಣಪ್ಪಗೌಡ, ಬಿ.ಎಸ್.ಮಹದೇವಪ್ಪ,ನಂಜಮಣಿ ಗುರುಮಲ್ಲಪ್ಪ ಸೇರಿದಂತೆ ಜೆಎಸ್‌ಎಸ್ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.