ಮೈಸೂರು: ದೊಡ್ಡ ಗುರಿ ಇಟ್ಟುಕೊಂಡು ಸಾಧನೆ ಮಾಡಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಮಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಎ.ಎನ್. ಪ್ರಕಾಶ್‌ಗೌಡ ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಂುದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದಿಂದ ಆಯೋಜಿಸಿದ್ದ ಎರಡು ದಿನಗಳ ‘ಮಾನಸ ಯುವ ಸಂವರ್ಧನೆ-2025’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಈ ನಿಟ್ಟಿನಲ್ಲಿ ವಿಫಲವಾದರೆ ಎದೆಗುಂದದೆ ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಪರಿಶ್ರಮ ಮೂಲಕ ಸಾಗಿದರೆ ಯಶಸ್ಸು ದೊರೆಯುತ್ತದೆ ಎಂದರು.
ವ್ಯಾಪಾರವಿರಲಿ, ವ್ಯವಸಾಯವಿರಲಿ ಪ್ರತಿಯೊಂದು ಕ್ಷೇತ್ರದಲ್ಲೂ ಅದರದೇ ಆದಂತಹ ಮಹತ್ವವಿರುತ್ತದೆ. ಅದರಲ್ಲಿ ನಮ್ಮ ಆಯ್ಕೆ ಯಾವುದು ಎಂಬುದು ಬಹಳ ಮುಖ್ಯವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಕ್ಷಣ ಪ್ರತಿದಿನದ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಬೇಕು. ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತ ಏನು ಆಗುತ್ತಿದೆ ಎನ್ನುವುದರ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ಓದು ಸೇರಿದಂತೆ ಯಾವುದೇ ಕೆಲಸವನ್ನು ನಾಳೆ ಎಂದು ಮುಂದೂಡದೆ ಇಂದೇ ಮಾಡುತ್ತಾ ಬಂದರೆ ಯಾವುದೇ ಪರೀಕ್ಷೆಗಳನ್ನು ಬರೆದು ಯಶಸ್ಸು ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಸಾಹದಿಂದ ತಯಾರಾಗಬೇಕು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ಎಂ.ಕೆ. ಸವಿತಾ ಮಾತನಾಡಿ, ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಬರೀ ಪಠ್ಯಪುಸ್ತಕಗಳನ್ನು ಓದುತ್ತಾ ಇದ್ದರೆ ಪ್ರಯೋಜನ ಇಲ್ಲ. ಸಾಮಾನ್ಯ ಜ್ಞಾನವನ್ನು ಪದವಿ ಹಂತದಲ್ಲಿ ಕಲಿಯಬೇಕು. ನೀವು ಸಾಕಷ್ಟು ರೀತಿಯಲ್ಲಿ ಕಲಿಯುವ ಅವಕಾಶಗಳು ಇವೆ. ಅವುಗಳನ್ನು ಆಯ್ಕೆ ಮಾಡಿಕೊಂಡು ಕಲಿಯಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಭಾಷೆ ತುಂಬಾ ಮುಖ್ಯವಾಗುತ್ತದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲ ಸಚಿವ ಎನ್.ನಾಗರಾಜು. ಮಾನಸ ಯುವ ಸಂದರ್ಶನ-2025 ಸಲಹಾ ಸಮಿತಿಯ ಅಧ್ಯಕ್ಷ ಪ್ರೊ.ಡಿ. ಆನಂದ್ ಇತರರು ಇದ್ದರು.