ಜಿಲ್ಲೆ

ಸತತ ಅಧ್ಯಯನದಿಂದ ಸಾಧನೆ ಸಾಧ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಸಹಜವಾಗಿ ಏಕಾಗ್ರತೆ ಸಾಧಿಸಬಹುದು. ಅಧ್ಯಯನಶೀಲರಾದಾಗ ಚಂಚಲ ಚಿತ್ತವಾದ ಮನಸನ್ನು ಹತೋಟಿಯಲ್ಲಿರಿಸಿಕೊಂಡು ಅಧ್ಯಯನ ಮಾಡಿದರೆ, ಜೀವನದಲ್ಲಿ ಎಂತಹ ಮಹತ್ಕಾರ್ಯವನ್ನೂ ಸಾಧಿಸಬಹುದು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಇಲ್ಲಿನ ಮಾಳಮಡ್ಡಿ ಕೆ.ಇ. ಬೋರ್ಡ್​ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ? ಕುರಿತು ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಅಭ್ಯಾಸ ಮಾಡುವಾಗ ಶ್ರದ್ಧೆ ಹಾಗೂ ಆತ್ಮ ವಿಶ್ವಾಸ ಹೊಂದಿರಬೇಕು. ಸಮಯದ ಸದ್ಬಳಕೆ ಮಾಡಿಕೊಂಡು ಕ್ರಮ ಬದ್ಧವಾಗಿ ಅಧ್ಯಯನ ಮಾಡಬೇಕು. ಗುಂಪು ಚರ್ಚೆಯ ಅಧ್ಯಯನ ನಿಮ್ಮಲ್ಲಿ ಏಕಾಗ್ರತೆ ಮೂಡಿಸುತ್ತದೆ ಎಂದರು.

ಡಿ. ಎಸ್​. ರಾಜಪುರೋಹಿತ ಮಾತನಾಡಿದರು. ಡಿಮ್ಹಾನ್ಸನ ಮನೋ ಆರೋಗ್ಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿದರು. ನಂತರ ಸಂವಾದ ನಡೆಸಲಾಯಿತು. ಎಂ.ವಿ. ಕವಳಿ, ವೀರಣ್ಣ ಒಡ್ಡೀನ, ಎಸ್​.ಡಿ. ಜಹಗೀರದಾರ, ಮಹಾಂತೇಶ ನರೇಗಲ್​, ಇತರರು ಇದ್ದರು.

ಎನ್​.ಎಸ್​. ಗೋವಿಂದರಡ್ಡಿ ಸ್ವಾಗತಿಸಿದರು. ಸಂಗಮೇಶ ಹಡಪದ ನಿರೂಪಿಸಿದರು. ಪ್ರಕಾಶ್​ ಕವಳಿ ವಂದಿಸಿದರು.