ವಿಜಯವಾಣಿ ಸುದ್ದಿಜಾಲ ಧಾರವಾಡ
ಜೀವನದಲ್ಲಿ ಅಪಾರ ಕಷ್ಟ-ನಷ್ಟಗಳೆಲ್ಲವನ್ನೂ ಸಮರ್ಥವಾಗಿ ಎದುರಿಸಿ, ಕಂಡ ಕನಸುಗಳು ಸಾಕಾರಗೊಳಿಸಿಕೊಂಡಾಗ ಯಶಸ್ಸು ತಾನಾಗಿಯೇ ಬರುತ್ತದೆ ಎಂದು ಹಿರಿಯ ಲೇಖಕಿ ಪ್ರೊ. ಮಾಲತಿ ಮುದಕವಿ ಹೇಳಿದರು.
ನಗರದ ದಿ.ಇಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ನ ಬಾಳೆಕುಂದ್ರಿ ಸಭಾಂಗಣದಲ್ಲಿ ಅನ್ವೇಷಣ ಕೂಟದ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸುರೇಶ ಗುದಗನವರ ಅವರ ‘ಅಡ್ಡಗೋಡೆಗಳನ್ನೊಡೆದು’ ಎಂಬ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೃತಿ ಪರಿಚಯಿಸಿದ ಕೃಷಿ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ, ಮನೆಯ ಒಳಗೂ ಹೊರಗೂ ಜೀವನದ ಎಲ್ಲ ರಂಗಗಳನ್ನು ಸತತ ಪರಿಶ್ರಮಗಳಿಂದ ದಿಟ್ಟವಾಗಿ ಎದುರಿಸಿದ ತೃತೀಯ ಲಿಂಗಿಗಳೂ ಸೇರಿ ಅನೇಕಾನೇಕ ಸಹನಶೀಲ ಸಾಹಸಿ ಮಹಿಳೆಯರನ್ನು ಈ ಪುಸ್ತಕ ಒಳಗೊಂಡಿದೆ. ಈ ಕೃತಿ ಕೇವಲ ಒಂದಿಷ್ಟು ಮಾಹಿತಿ ಸಂಗ್ರಹವಾಗಿರದೆ ಅಧ್ಯಯನಶೀಲ ವ್ಯಕ್ತಿಯೊಬ್ಬರ ಸತತ ಪರಿಶ್ರಮದ ಫಲವಾಗಿ ರೂಪುಗೊಂಡ ಅಪರೂಪದ ಗ್ರಂಥವಾಗಿದೆ ಎಂದರು.
ಆಕಾಶವಾಣಿ ಮುಖ್ಯಸ್ಥ ಡಾ. ಬಸು ಬೇವಿನಗೀಡದ ಮಾತನಾಡಿ, ಆಳ ಅಧ್ಯಯನಕ್ಕೆ ಸಾಕ್ಷಿಯಾಗಿ ಈ ಪುಸ್ತಕ ರೂಪುಗೊಂಡಿದ್ದು, ಅವರಿಂದ ಇಂತಹ ಅನೇಕ ಉದ್ಭೋದಕ ಗ್ರಂಥಗಳು ರಚನೆಗೊಂಡು ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದರು.
ಲೇಖಕ ಸುರೇಶ ಗುದಗನವರ, ಶೈಲಾ ಕರಗುದರಿ ಮಾತನಾಡಿದರು. ಡಾ. ನರಸಿಂಹ ಪರಾಂಜಪೆ ಅಧ್ಯಕ್ಷತೆ ವಹಿಸಿದ್ದರು.
ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ, ಆನಂದ ಕಮಲಾಪುರ, ಡಾ. ಅನಿರುದ್ಧ ಕುಲಕರ್ಣಿ, ಸುಧೀಂದ್ರ ಇಟ್ನಾಳ, ಡಾ. ಡಿ.ಎಂ. ಹಿರೇಮಠ, ಪ್ರೊ. ದುಷ್ಯಂತನಾಡಗೌಡ, ಹರ್ಷ ಡಂಬಳ, ಅನಂತ ಥಿಟೆ, ಸುಭಾಸ ಪಾಟೀಲ, ಮಲ್ಲಿಕಾರ್ಜುನ ಚಿಕ್ಕಮಠ, ಮಲ್ಲಿಕಾರ್ಜುನ ಸಿಂದಗಿ, ವೀರಣ್ಣ ವಡ್ಡೀನ, ಅರವಿಂದ ಕುಲಕರ್ಣಿ, ಎಂ.ಆರ್. ಬಾಳಿಕಾಯಿ, ರಾಜೀವ ಪಾಟೀಲಕುಲಕರ್ಣಿ, ರಾಮಚಂದ್ರ, ಧೋಂಗಡೆ, ರೇಣುಕಾ ಗುದುಗನವರ, ಮಹಾಂತೇಶ ನರೆಗಲ್, ಇತರರು ಇದ್ದರು.
ವೆಂಕಟೇಶ ದೇಸಾಯಿ ಸ್ವಾಗತಿಸಿದರು. ರಾಜೇಶ್ವರಿ ಗುದಗನವರ ನಿರೂಪಿಸಿದರು, ಡಾ. ನಾಗರಾಜ ಗುದಗನವರ ವಂದಿಸಿದರು.