ಮೈಸೂರು: ಕಷ್ಟ ಎನ್ನುವ ಭಯ ಹಾಗೂ ಭ್ರಮೆಯನ್ನು ಕಳಚಿದರೆ ಯಶಸ್ಸು ಕೈ ಹಿಡಿಯುತ್ತದೆ ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಎಂ.ಜಿ. ಮಂಜುನಾಥ್ ಅಭಿಪ್ರಾಯಪಟ್ಟರು.
ಜ್ಞಾನಬುತ್ತಿ ಸಂಸ್ಥೆಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಯುಜಿಸಿ-ನೆಟ್ ಪರೀಕ್ಷಾ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು.
ನಿರಂತರ ಕಠಿಣ ಪರಿಶ್ರಮದಿಂದ ಅಸಾಧ್ಯವಾದುದನ್ನು ಸಾಧಿಸಬಹುದು. ಹಾಗಾಗಿ ಯಶಸ್ಸಿಗೆ ಮುಖ್ಯವಾಗಿ ಆತ್ಮವಿಶ್ವಾಸ ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
1996ರಲ್ಲಿ ಯುಜಿಸಿ ಪರೀಕ್ಷೆ ಆರಂಭವಾಗಿದ್ದು, ನಾನು ಕೂಡ ಪರೀಕ್ಷೆ ಎದುರಿಸಿ ಅಧ್ಯಾಪಕನಾಗಿ ಆಯ್ಕೆಯಾದೆ. ಯುಜಿಸಿ ನೆಟ್ ಪರೀಕ್ಷೆಯ ಗುಟ್ಟು ಹಳೆಯ ಪ್ರಶ್ನೆಗಳನ್ನು ಆಗಾಗ್ಗೆ ತಿರುವು ಹಾಕಿ ಎಂದರು.
ಯಾವುದೇ ಪರೀಕ್ಷೆ ಎದುರಿಸುವಾಗ ಮೊದಲು ಸುಲಭದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದರೆ ಸಮಯದ ಮಿತಿಯ ನಡುವೆ ಅತಿ ಹೆಚ್ಚು ಪ್ರಶ್ನೆಗೆ ಉತ್ತರಿಸಲು ಸಾಧ್ಯ.ಯುಜಿಸಿ ಪರೀಕ್ಷೆಯಲ್ಲಿ ಅತಿಹೆಚ್ಚಿನ ಅಂಕ ಬಂದರೆ ಪ್ರತಿ ತಿಂಗಳು ಸುಮಾರು 40 ಸಾವಿರ ರೂ. ಯುಜಿಸಿ ಶಿಷ್ಯವೇತನ ಐದು ವರ್ಷಗಳ ಕಾಲ ಸಿಗಲಿದೆ ಎಂದು ಹೇಳಿದರು.
ಯುಜಿಸಿ ನೆಟ್ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಹಾಗೂ ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆ ಡಾ. ಬಿ.ಆರ್. ಜಯಕುಮಾರಿ ಮಾತನಾಡಿ, ಸಂಪತ್ತನ್ನು ನಾವು ಕಾಪಾಡಬೇಕು. ಆದರೆ ವಿದ್ಯೆ ನಮ್ಮನ್ನು ಕಾಪಾಡುತ್ತದೆ. ಸಂಪತ್ತನ್ನು ಅಪಹರಿಸಬಹುದು ಆದರೆ ಜ್ಞಾನವನ್ನು ಕದಿಯಲು ಸಾಧ್ಯವಿಲ್ಲ ಎಂದರು.
ನಮ್ಮ ಒಳಗಿರುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊರಗೆ ತರಲು ಸ್ಪರ್ಧೆ ಇರಬೇಕು. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಅಂತಹ ಕೆಲಸವನ್ನು ಮಾಡುತ್ತವೆ. ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಇದ್ದರೆ ಪ್ರತಿಫಲವಾಗಿ ಯಶಸ್ಸು ಸಿಗುವುದರಲ್ಲಿ ಯಾವುದೇ ಅನುಮಾನ ಬೇಡ. ಮನಸ್ಸು ಮಾಡಿ, ಕರ್ತವ್ಯ ನಿಷ್ಠರಾಗಿ, ಕಾದು ನೋಡಿ ಎಂಬ ಮಾತಿನಲ್ಲಿ ಸದಾ ನಂಬಿಕೆಯಿಟ್ಟು ಕೆಲಸಮಾಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡ ಮಾತನಾಡಿ, ಆಸಕ್ತಿ ಮತ್ತು ಕಠಿಣ ಪರಿಶ್ರಮ ಎರಡೂ ಸೇರಿದರೆ ಮಾತ್ರ ಗೆಲುವು ನಿಮ್ಮದಾಗುತ್ತದೆ. ಶಿಕ್ಷಕ ವೃತ್ತಿಯನ್ನು ಆಯ್ದಕೊಂಡು ಹೊರಟಿರುವ ನಿಮಗೆ ಶುಭವಾಗಲಿ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್.ಎನ್.ಪದ್ಮನಾಭ, ಶಿಕ್ಷಣ ತಜ್ಞ ಪ್ರೊ. ಎಚ್. ಎಸ್. ಮಲ್ಲಿಕಾರ್ಜುನಶಾಸ್ತ್ರಿ, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್. ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ವಿ. ಜಯಪ್ರಕಾಶ್, ಪ್ರೊ. ಕೃ.ಪಾ.ಗಣೇಶ್, ಕೆ.ವೈ.ನಾಗೇಂದ್ರ, ಕಿರಣ್ ಕೌಶಿಕ್, ಯು.ಎಂ. ಶರದ್‌ರಾವ್, ಪ್ರೊ. ಎಚ್.ಆರ್. ತಿಮ್ಮೇಗೌಡ, ಡಾ. ಎಸ್.ಬಿ.ಎಂ. ಪ್ರಸನ್ನ, ರೋಹನ್ ರವಿಕುಮಾರ್ ಇತರರಿದ್ದರು.