ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಿಂದ ಆಯೋಜಿಸಿದ್ದ ಗುರುವಂದನೆ, ಪ್ರತಿಭಾ ಪುರಸ್ಕಾರ, ಸಿಇಟಿ-ನೀಟ್ ತರಗತಿ ಕಾರ್ಯಕ್ರಮವನ್ನು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶುಂಭನಾಥ ಸ್ವಾಮೀಜಿ ಉದ್ಘಾಟಿಸಿದರು. ಡಾ.ಸಿ.ಟಿ.ಜಯದೇವ್, ಶೇಖರ್ ಹೊಡೆನೂರು, ದಿವ್ಯಕುಮಾರ್ ಇದ್ದರು. 
ಜಿಲ್ಲೆ

ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿದರೆ ಯಶಸ್ಸು ಸಾಧ್ಯ

ರವಿಕುಮಾರ್ ಪಿ. ಕೆ

ಬೇಲೂರು: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಅಧ್ಯಯನದೊಂದಿಗೆ ಗೆದ್ದೇ ಗೆಲ್ಲುವೆ ಎಂಬ ಆತ್ಮವಿಶ್ವಾಸದಿಂದ ಮುನ್ನುಗ್ಗಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶುಂಭನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಜೆಪಿ ನಗರದ ಅರ್ವಿ ಕಲ್ಯಾಣ ಮಂಟಪದಲ್ಲಿ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಿಂದ ಮಂಗಳವಾರ ಆಯೋಜಿಸಿದ್ದ ಗುರು ವಂದನೆ, ಪ್ರತಿಭಾ ಪುರಸ್ಕಾರ, ಸಿಇಟಿ-ನೀಟ್ ತರಗತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಿಂದಲೇ ಹೆಚ್ಚು ಅನಾಹುತಗಳು ನಡೆಯುತ್ತಿದೆ. ಪಾಲಕರು ಮತ್ತು ಶಿಕ್ಷಕರು ಶಿಕ್ಷಣದ ಜತೆಯಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಿದರೆ ಅವರು ಭ್ರಷ್ಟರಾಗಲು ಸಾಧ್ಯವಿಲ್ಲ ಎಂದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣದೊಂದಿಗೆ ಸಂಸ್ಕೃತಿ, ಸಂಸ್ಕಾರ, ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ರಾಜ್ಯದ ವಿವಿಧೆಡೆ ಗ್ರಾಮೀಣ ಭಾಗದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ನಮ್ಮ ಗುರುಗಳಿಗೆ ಸಲ್ಲುತ್ತದೆ. ನಮ್ಮ ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ಅವರು ಎಂದಿಗೂ ಪಾಲಕರ ನಂಬಿಕೆಗಳನ್ನು ಹುಸಿ ಮಾಡಬಾರದು. ಅಲ್ಲದೆ ಪುಸ್ತಕಗಳು ವಿದ್ಯಾರ್ಥಿಗಳ ಭವಿಷ್ಯ ಬದಲಾಯಿಸುವ ಏಕೈಕ ಶಕ್ತಿ ಹೊಂದಿವೆ. ಆದ್ದರಿಂದ ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಳ್ಳಬೇಕು. ಬೇಲೂರು ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಪ್ರತಿವರ್ಷ ಶೇ. ನೂರರಷ್ಟು ಫಲಿತಾಂಶ ಪಡೆಯುವ ಮೂಲಕ ಮಠಕ್ಕೆ ಕೀರ್ತಿ ತಂದಿದೆ ಎಂದರು.

ಚಿಕ್ಕಮಗಳೂರು ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ನಂತರ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಒಂದು ರೀತಿಯ ಗೊಂದಲವಿರುತ್ತದೆ. ಆದರೆ ವಿದ್ಯಾರ್ಥಿಗಳಾದ ನೀವು ಸರಿಯಾಗಿ ಪಿಯು ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಪಡೆದರೆ ನಿಮ್ಮ ಬದುಕು ಹಸನಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮತ್ತು ವಾಣಿಜ್ಯ ತರಗತಿಗೆ ಹೆಚ್ಚಿನ ಬೇಡಿಕೆ ಇದೆ. ಈ ಕಾರಣದಿಂದ ನಿಮ್ಮ ಆಯ್ಕೆ ಮಹತ್ವಪೂರ್ಣದಿಂದ ಕೂಡಿರಬೇಕು. ಪಠ್ಯದ ಜತೆಗೆ ಸಾಮಾನ್ಯ ಜ್ಞಾನದ ಕಡೆಯೂ ಗಮನ ನೀಡಿದರೆ ಮಾತ್ರ ಉನ್ನತ

ಹುದ್ದೆಗಳನ್ನು ನಿರ್ವಹಿಸಲು ಸಾಧ್ಯ. ತರಗತಿ ಹೊರತುಪಡಿಸುವ ಜ್ಞಾನಕ್ಕೂ ಅದ್ಯತೆ ನೀಡಿ ಎಂದರು.

ಮೊಸಳೆ ಹೊಸಹಳ್ಳಿ ಕಾಲೇಜಿನ ಪ್ರಾಧ್ಯಾಪಕ ಹಾಗೂ ಸಂಪನ್ಮೂಲ ವ್ಯಕ್ತಿ ಶೇಖರ್ ಹೊಡೆನೂರು, ಪ್ರಾಂಶುಪಾಲ ದಿವ್ಯಕುಮಾರ್ ಸೇರಿದಂತೆ ಇತರರಿದ್ದರು.