ಜಿಲ್ಲೆ

ಗುರಿಯೊಂದಿಗೆ ಸಾಗಿದರೆ ಯಶಸ್ಸು ಸಾಧ್ಯ: ಕುಲಪತಿ ಡಾ.ಎಚ್.ಬಸವನಗೌಡಪ್ಪ ಕಿವಿಮಾತು

ಮೈಸೂರು:ವಿದ್ಯಾರ್ಥಿಗಳು ಶಾಲಾ ದಿನಗಳಲ್ಲೇ ಗುರಿ ಇಟ್ಟುಕೊಳ್ಳಬೇಕು. ಅದೇ ದಾರಿಯಲ್ಲಿ ಏಕಾಗ್ರತೆಯಿಂದ ಸಾಗಬೇಕು ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಎಚ್.ಬಸವನಗೌಡಪ್ಪ ಕಿವಿಮಾತು ಹೇಳಿದರು.

ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಔಷಧ ರಸಾಯನಶಾಸ್ತ್ರ ವಿಭಾಗ, ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಮತ್ತು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಹಯೋಗದಲ್ಲಿ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ಆಯೋಜಿಸಿರುವ ‘ಯೂಸುಫ್ ಹಮಿದ್ ರಸಾಯನ ಶಾಸ್ತ್ರ ಶಿಬಿರ’ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಭವಿಷ್ಯದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆಯಡೆ ಆಸಕ್ತಿ ಬೆಳೆಸಿಕೊಳ್ಳುವ ಅಗತ್ಯವಿದೆ. ಜಗತ್ತಿನಲ್ಲಿ ಅನೇಕ ಸಾಧನೆ ಮಾಡಿರುವ ಸಾಧಕರ ಜೀವನಚರಿತ್ರೆ ಗಮನಿಸಿದರೆ ಅವರೆಲ್ಲ ವಿದ್ಯಾರ್ಥಿಗಳಾಗಿದ್ದಾಗ ಕಲಿತ ಜ್ಞಾನವೇ ಅವರಿಗೆ ಮುಂದಿನ ಸಾಧನೆಗೆ ಬುನಾದಿ ಆಗಿತ್ತು ಎಂದರು.

ಜಗತ್ತು ಕಂಡ ಅಪ್ರತಿಮ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ವಿದ್ಯಾರ್ಥಿ ಆಗಿದ್ದಾಗ ಅಷ್ಟೊಂದು ಚುರುಕಾಗಿರಲಿಲ್ಲ ಎನ್ನುವ ಕಾರಣ ನೀಡಿ ಅವರನ್ನು ಶಾಲೆಯಿಂದ ಹೊರಹಾಕಲಾಯಿತು. ಅವರ ತಾಯಿಯು ಇದನ್ನೇ ಸವಾಲಾಗಿ ಸ್ವೀಕರಿಸಿ, ನಿನ್ನ ಬುದ್ಧಿಯ ಮಟ್ಟದಲ್ಲಿ ಶಾಲೆಯ ಶಿಕ್ಷಕರು ಇಲ್ಲ. ಅದಕ್ಕೆ ನಿನ್ನನ್ನು ಶಾಲೆಯಿಂದ ಹೊರಹಾಕಿದ್ದಾರೆ ಎಂದು ಮಗನಿಗೆ ಧೈರ್ಯ ತುಂಬಿದ್ದಲ್ಲದೆ, ತಾವೇ ಪಾಠ ಮಾಡಿದರು. ಮುಂದೆ ಅವರು ಅನೇಕ ಸಂಶೋಧನೆಗಳನ್ನು ಮಾಡಿ ದೊಡ್ಡ ವಿಜ್ಞಾನಿ ಆದರು ಎಂದು ವಿವರಿಸಿದರು.

ಇಂತಹ ಸಾಧಕರು ನಮ್ಮ ಜಗತ್ತಿನಲ್ಲಿ ಹತ್ತು-ಹಲವು ಜನರು ಸಿಗುತ್ತಾರೆ. ಇಂತಹವರ ಜೀವನವನ್ನು ಮಾದರಿಯಾಗಿಸಿಕೊಂಡು ವಿದ್ಯಾರ್ಥಿಗಳು ಅವರ ಸಾಧನೆಯಿಂದ ಸ್ಫೂರ್ತಿ ಪಡೆಯಬೇಕು ಎಂದು ಸಲಹೆ ನೀಡಿದರು.

ರಸಾಯನಶಾಸ್ತ್ರ ವಿಷಯವು ಬಹಳ ವಿಶಾಲವಾದ ವ್ಯಾಪ್ತಿ ಹೊಂದಿದೆ. ಈಗ ಜೀವನದಲ್ಲಿ ಹಲವು ಕಡೆ ರಸಾಯನಶಾಸ್ತ್ರದ ಉಪಯೋಗವಾಗುತ್ತಿದೆ. ಸಾವಯುವ ರಸಾಯನಶಾಸ್ತ್ರ, ಮೆಟಿರಿಯಲ್‌ಸ್ಟಿಕ್ ಕೆಮಿಸ್ಟ್ರಿ ,ಫಾರ್ಮಸಿ ಹೀಗೆ ವಿವಿಧ ವಿಭಾಗಗಳಾಗಿ ಕವಲು ಒಡೆದಿದೆ. ವಿಜ್ಞಾನ ವಿಷಯಗಳನ್ನು ಕುತೂಹಲದಿಂದ ಓದುವ ಆಸಕ್ತಿ ಇರುವ ವಿದ್ಯಾರ್ಥಿಗಳ ಜ್ಞಾನ ದಾಹ ತಣಿಸಲು ಇಂತಹ ಶಿಬಿರಗಳ ಅವಶ್ಯಕತೆ ಇದೆ ಎಂದರು.

ಮೈಸೂರು, ಬೆಳಗಾವಿ, ಗದಗ, ಧಾರವಾಡ, ಹಾವೇರಿ ಮತ್ತು ಚಿಕ್ಕೋಡಿ ಜಿಲ್ಲೆಗಳ ವಿವಿಧ ಸರ್ಕಾರಿ ಶಾಲೆಗಳ 9ನೇ ತರಗತಿ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ. 3 ದಿನಗಳ ಕಾಲ ಶಿಬಿರ ನಡೆಯಲಿದೆ.

ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಕಾರ್ಯಕ್ರಮ ನಿರ್ವಾಹಕಿ ಮೆಲಿಸ್ಸಾ ಮೆಂಡೋನ್ಸಾ, ರಾಜಲಕ್ಷ್ಮೀ ಚಿಲ್ಡ್ರನ್ ಫೌಂಡೇಶನ್ ಯೋಜನಾ ನಿರ್ದೇಶಕಿ ಡಾ.ಸರಸಿಜಾ ಸುರೇಶ್, ಶಿಬಿರ ಸಂಯೋಜಕ ಡಾ.ಬಿ.ಎಂ. ಗುರುಪಾದಯ್ಯ ಇತರರು ಇದ್ದರು.