ರಾಯಚೂರಿನ ಕೃಷಿ ವಿಜ್ಞಾನಗಳ ವಿವಿಯ ಕ್ರೀಡಾ ಮೈದಾನದಲ್ಲಿ ಎಬಿವಿಪಿಯಿಂದ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿವೇಕ ಟ್ರೋಫಿ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ರಾಘವೇಂದ್ರ ಅನ್ವೇಕರ್ ಮಾತನಾಡಿದರು. ಸಂಘಟನೆ ರಾಷ್ಟ್ರೀಯ ಕಾರ್ಯದರ್ಶಿ ಕುಮಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಚೀನ್ ಕುಳಗೇರಿ, ಪದಾಕಾರಿಗಳಾದ ಡಾ.ಎಂ.ಜಿ.ಪಾಟೀಲ್, ನಿಜಾನಂದ ರೆಡ್ಡಿ, ಭಾಗ್ಯಶ್ರೀ ಇದ್ದರು. 
ಜಿಲ್ಲೆ

ಆತ್ಮಸ್ಥೆರ್ಯದಿಂದ ಮುನ್ನಡೆದಾಗ ಮಾತ್ರ ಯಶಸ್ಸು

ರಾಯಚೂರು: ಜೀವನದಲ್ಲಿ ಸೋತಾಗ, ಗೆದ್ದಾಗ ಉಚಿತ ಸಲಹೆ ನೀಡುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವುಗಳಿಗೆ ತಲೆಕೆಡಿಸಿಕೊಳ್ಳದೆ ಆತ್ಮಸ್ಥೆರ್ಯದೊಂದಿಗೆ ಮುನ್ನಡೆದಾಗ ಮಾತ್ರ ಯಶಸ್ಸು ದೊರೆಯಲಿದೆ ಎಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ರಾಘವೇಂದ್ರ ಅನ್ವೇಕರ್ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಕ್ರೀಡಾ ಮೈದಾನದಲ್ಲಿ ಎಬಿವಿಪಿ ಉತ್ತರ ಕರ್ನಾಟಕ ಪ್ರಾಂತದಿಂದ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿವೇಕ ಟ್ರೋಫಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡಾ ಸ್ಪೂರ್ತಿಯಿಂದ ನಿರಂತರ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಯುವಕರು ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಬೇಕು. ತರಬೇತಿ ನೀಡಿದ ಗುರುಗಳನ್ನು ಕ್ರೀಡಾಪಟುಗಳು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಸಂಘಟನೆ ರಾಷ್ಟ್ರೀಯ ಕಾರ್ಯದರ್ಶಿ ಕುಮಾರ ಮಾತನಾಡಿ, ಖೇಲೋ ಭಾರತ ಆಯಾಮದ ಮೂಲಕ ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಉತ್ತೇಜನ ನೀಡುವ ಅವಶ್ಯಕತೆಯಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಚೀನ್ ಕುಳಗೇರಿ ಮಾತನಾಡಿ, ಕಳೆದ 75 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸದಾ ಧ್ವನಿಯಾಗಿ ನಿಲ್ಲುವ ಕೆಲಸವನ್ನು ಎಬಿವಿಪಿ ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳಲ್ಲಿ ದೇಶದ ಪರವಾದ ಚಿಂತನೆ, ಮನಸ್ಥಿತಿ ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆ ಪದಾಕಾರಿಗಳಾದ ಡಾ.ಎಂ.ಜಿ.ಪಾಟೀಲ್, ಡಾ.ಉಪೇಂದ್ರ ನಾಯಕ, ಪೃಥ್ವಿಕುಮಾರ, ಗಂಗಾಧರ ಹಂಜಗಿ, ನಿಜಾನಂದ ರೆಡ್ಡಿ, ನಾಗರಾಜ ಭಟಗೆರ, ರಾಜಶೇಖರ ಬಾವಿಮನಿ, ಅಪ್ಪು ಹೂಗಾರ, ಭಾಗ್ಯಶ್ರೀ ಉಪಸ್ಥಿತರಿದ್ದರು.