ಜಿಲ್ಲೆ

ಪರಿಶ್ರಮದಿಂದ ಸಾಧನೆ ಹಾದಿ ಸುಲಭ: ಛಾಯಾ ನಂಜಪ್ಪ

ಆದರ್ಶ್. ಎಂ.ಕೆ.

ಮಡಿಕೇರಿ: ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಕಠಿಣ ಪರಿಶ್ರಮ, ದೃಢ ನಿರ್ಧಾರ, ಆತ್ಮವಿಶ್ವಾಸ ಇದ್ದಲ್ಲಿ ಸಾಧನೆಯ ಹಾದಿ ಸುಲಭವಾಗುತ್ತದೆ ಎಂದು ಮೈಸೂರಿನ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ಹೇಳಿದರು.


ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸಹಯೋಗದಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಕ್ಕಡ ನಮ್ಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.


ಕಷ್ಟದ ಸಮಯವನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದು ಉತ್ತುಂಗಕ್ಕೇರುವುದೇ ಸಾಧನೆ. ನನ್ನಿಂದ ಆಗದು ಎಂಬ ಮನೋಭಾವನೆಯಿಂದ ಹೊರಬಂದು ಗುರಿ ಸಾಧನೆಗಾಗಿ ಪರಿಶ್ರಮಪಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ. ನಮ್ಮ ಬೆಳವಣಿಗೆಯ ಜತೆಗೆ ಸಂಸ್ಕೃತಿಯನ್ನೂ ಪಾಲಿಸಿಕೊಂಡು ಹೋಗಬೇಕು. ಕೊಡವರು ತಮ್ಮ ಮೂಲವನ್ನು ಮರೆಯಬಾರದು ಎಂದರು.


ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಮುಚ್ಚುವ ಹಂತದಲ್ಲಿದ್ದಾಗ ಅದನ್ನು ಉಳಿಸಿಕೊಳ್ಳಲು ಸಾಕಷ್ಟು ಶ್ರಮ ಪಡಬೇಕಾಯಿತು. ಇಂದು ಆಸ್ಪತ್ರೆಯಲ್ಲಿ ೧೦೦ ಹಾಸಿಗೆಗಳ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಛಾಯಾ ನಂಜಪ್ಪ ತಿಳಿಸಿದರು.


ಕಕ್ಕಡ ತಿಂಗತ್‌ರ ನೈಪು-ಪೈಪು-ತೀನಿ ವಿಷಯದ ಕುರಿತು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ವಿಚಾರ ಮಂಡಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಮುಖ ಬೆಳೆಯಾಗಿತ್ತು. ಕೊರೆಯುವ ಚಳಿಯ ಜತೆಗೆ ಎಡೆಬಿಡದೆ ಸುರಿಯುವ ಮಳೆಯಲ್ಲಿ ಗದ್ದೆ ಕೆಲಸ ಪೂರ್ಣಗೊಳಿಸುವುದು ಸವಾಲಿನ ಕೆಲಸವಾಗಿತ್ತು. ಮಹಿಳೆಯರು ಮಳೆಗಾಲದ ರಜೆಯಲ್ಲಿ ಮನೆಯಲ್ಲಿರುತ್ತಿದ್ದ ಮಕ್ಕಳನ್ನು ನಿಭಾಯಿಸಿಕೊಂಡು ಮನೆ ಕೆಲಸ ಮಾಡುತ್ತಿದ್ದರೆ, ಪುರುಷರು ಬೆಳಗ್ಗಿನಿಂದ ಸಂಜೆವರೆಗೂ ಗದ್ದೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಸಭೆ ಸಮಾರಂಭಗಳನ್ನು ನಡೆಸಲು ಸಮಯವಿಲ್ಲದ ಸ್ಥಿತಿಯಿತ್ತು. ಹೀಗಾಗಿ ಕಕ್ಕಡ ತಿಂಗಳಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಆದರೆ, ಕಕ್ಕಡ ಅವಧಿ ಕೆಟ್ಟದೆಂಬ ತಪ್ಪು ತಿಳುವಳಿಕೆ ಹಲವರಲ್ಲಿದೆ. ಕಕ್ಕಡ, ಕೊಡವರ ಪೂಜ್ಯವಾದ ತಿಂಗಳು. ಭೂಮಿ ತಾಯಿಗೆ ನೀರುಣಿಸುವ ಸಮಯವಿದು. ಶುಭ ಸಮಾರಂಭ ನಡೆಸಲು ಯೋಗ್ಯವಾದ ತಿಂಗಳು ಎಂದು ಸ್ಪಷ್ಟಪಡಿಸಿದರು.


ಅಡುಗೆಗೆ ಮಣ್ಣಿನ ಪಾತ್ರೆಗಳನ್ನು ಬಳಸುವುದು ಉತ್ತಮ. ವಿನಿಗರ್ ಬದಲು ಕಾಚಂಪುಳಿ ಉಪಯೋಗಿಬೇಕು. ತೋಟಗಳಲ್ಲಿ ಹಳೆಯ ಕಾಲದ ಮರಗಳನ್ನು ಬೆಳೆಸಬೇಕು. ಯುವ ಪೀಳಿಗೆ ಕೊಡಗಿನಲ್ಲೇ ನೆಲೆಸುವಂತಾಗಬೇಕು. ಕೊಡವಾಮೆಯ ಉಳಿವಿಗೆ ಎಲ್ಲರೂ ಪಣತೊಡಬೇಕೆಂದು ಶೋಭಾ ಸುಬ್ಬಯ್ಯ ಕರೆ ನೀಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ಕಕ್ಕಡ ತಿಂಗಳಲ್ಲಿ ಮದ್ದು ಸೊಪ್ಪಿನಿಂದ ತಯಾರಿಸುವ ಖಾದ್ಯಗಳು ಆರೋಗ್ಯಕಾರಿಯಾಗಿರುತ್ತದೆ ಎಂದ ಅವರು, ಯಾವುದೇ ಅಡಚಣೆಯಿಲ್ಲದೇ ಮುಂದಿನ ದಿನಗಳಲ್ಲಿ ಅಕಾಡೆಮಿ ವತಿಯಿಂದ ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಆಶಿಸಿದರು.


ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಮಾತನಾಡಿ, ಕೊಡವ ಭಾಷೆ, ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ಮಕ್ಕಳಿಗೆ ಒಳ್ಳೆಯ ಗುಣನಡತೆಯನ್ನು ಹೇಳಿಕೊಡಬೇಕು. ಅವರಿಗಾಗಿ ಸಮಯ ಮೀಸಲಿಡಬೇಕೆಂದು ಹೇಳಿದರು.


ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶುಭ ಕಾರ್ಯಗಳಿಗೆ ಕಕ್ಕಡ ಸೂಕ್ತ ಸಮಯವಲ್ಲ ಎಂಬುದು ಕೇವಲ ಮೂಢನಂಬಿಕೆ. ಹಿಂದಿನ ಕಾಲದಲ್ಲಿ ಒಂದೆಡೆ ಧಾರಾಕಾರ ಮಳೆ ಸುರಿಯುತ್ತಿದ್ದರೆ, ಮತ್ತೊಂದೆಡೆ ಕೃಷಿ ಕೆಲಸ ಪೂರೈಸುವುದು ಮುಖ್ಯವಾಗಿತ್ತು. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸುವುದು ಹಾಗೂ ಭಾಗವಹಿಸುವುದು ಕಷ್ಟವಾಗಿತ್ತು. ಇದೇ ಕಾರಣಕ್ಕೆ ಕಾರ್ಯಕ್ರಮಗಳಿಂದ ಅಂದಿನವರು ದೂರ ಉಳಿದಿದ್ದರು ಎಂದು ತಿಳಿಸಿದರು.


ಕೊಡವ ಜನಾಂಗ ಸಣ್ಣದಾದರೂ ದೇಶದ ಉದ್ದಗಲಕ್ಕೂ ಹೆಸರುವಾಸಿಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಕೊಡವರು ಸಾಧನೆ ಮಾಡ್ತಿದ್ದಾರೆ. ಕೊಡವರಿಗೆ ಐನ್‌ಮನೆ, ಮುಂದ್‌ಮನೆ, ಕೈಮಡ ಇವೆಲ್ಲಾ ಬಹಳ ಮುಖ್ಯವಾಗುತ್ತದೆ. ಆದರೆ, ಇತ್ತೀಚೆಗೆ ಹಿಂದಿನ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವವರೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಕಕ್ಕಡ ಆಚರಣೆಯನ್ನು ಹಬ್ಬದಂತೆ ಸಂಭ್ರಮಿಸುತ್ತಿರುವುದು ಸಂತಸದ ವಿಚಾರ ಎಂದರು.


ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟೀರ ಗಿರೀಶ್, ಅಕಾಡೆಮಿಯ ನೂತನ ಆಡಳಿತ ಮಂಡಳಿಯ ಮೊದಲ ಕಾರ್ಯಕ್ರಮ ಇದಾಗಿದ್ದು, ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಪದಾಧಿಕಾರಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಗಮನ ಸೆಳೆದ ವಿವಿಧ ಖಾದ್ಯ
ಕಕ್ಕಡ ತಿನಿಸುಗಳ ಪ್ರದರ್ಶನ ಮತ್ತು ಪೈಪೋಟಿಯನ್ನು ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ಉದ್ಘಾಟಿಸಿದರು. ಮದ್ದ್ ಪಾಯಿಸ, ತಾತೆ ತೊಪ್ಪು ಪಲ್ಯ, ಚೆಕ್ಕೆರ ಕುವಲೆ ಪುಟ್ಟ್, ಚೆಕ್ಕೆಕುರು ಪಜ್ಜಿ, ನಾಡ್ ಕೋಳಿ ಕರಿ, ಪಂದಿ ಕರಿ, ಞಂಡ್ ಕರಿ, ಬೈಂಬಳೆ ಕರಿ, ಕಾಡ್ ಮಾಂಗೆ ಕರಿ, ಬಾಳೆ ನುರ್‌ಕ್ ಹಾಗೂ ಕಕ್ಕಡ ತಿಂಗಳ ವಿಶೇಷವಾದ ತಿಂಡಿಯ ಸ್ಪರ್ಧೆ ಹಾಗೂ ಪ್ರದರ್ಶನ ಗಮನ ಸೆಳೆಯಿತು. ಅಕಾಡೆಮಿ ಪ್ರಕಟಿತ ಪುಸ್ತಕದ ಪ್ರದರ್ಶನ, ಮಾರಾಟ, ಮಹಿಳೆಯರ ಅಂಗಡಿ ಮಳಿಗೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.