ಮೈಸೂರು: ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಪರೀಕ್ಷೆಯಲ್ಲಿ ಶೇ.95 ರಷ್ಟು ಅಂಕಗಳಿಸುವುದೇ ಜೀವನದ ಯಶಸ್ಸು ಎಂದು ತಿಳಿಯುವಂತಿಲ್ಲ. ಸ್ನಾತಕೋತ್ತರ ಪದವಿ ಮುಗಿಯುವವರೆಗೂ ಈ ಸಾಧನೆ ಕಾಯ್ದುಗೊಳ್ಳಬೇಕು ಎಂದು ಬರಹಗಾರ ಸತೀಶ್ ಜವರೇಗೌಡ ಹೇಳಿದರು.
ಪುಣ್ಯಕೋಟಿ ಸೇವಾ ಟ್ರಸ್ಟ್, ಐಶ್ವರ್ಯಾ ಫೌಂಡೇಷನ್, ವಿ.ಎನ್.ಡೆವಲಪರ್ಸ್, ಎಸ್‌ಎಲ್ವಿ ಬುಕ್ ಏಜೆನ್ಸಿ ಸಹಯೋಗದಲ್ಲಿ ವಿಜಯನಗರದ ಯೋಗನರಸಿಂಹ ಸ್ವಾಮಿ ದೇವಸ್ಥಾನ ಬಳಿ ಶುಕ್ರವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ವಿದ್ಯಾರ್ಥಿಗಳು ಪಿಯುಸಿ, ಎಸ್‌ಎಸ್‌ಎಲ್‌ಸಿ ಮುಗಿಸಿದರೆ ಜೀವನದ ಸಾಧನೆ ಎಂಬಂತೆ ಭಾವಿಸುತ್ತಿದ್ದಾರೆ. ಆದರೆ ಸಾಧನೆ ಇನ್ನೂ ಮುಂದೆ ಇದೆ. ಪ್ರತಿ ಮನೆಯಲ್ಲೂ ಪುಟ್ಟ ಗ್ರಂಥಾಲಯ ಇರಬೇಕು. ಇದರಿಂದ ವಿದ್ಯಾರ್ಥಿಗಳ ಬೌದ್ಧಿಕಮಟ್ಟ ಹಾಗೂ ಮನೋವಿಕಾಸಕ್ಕೆ ನಾಂದಿಯಾಗುತ್ತದೆ. ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೆ ಪುಸ್ತಕ ಓದುವ ಹವ್ಯಾಸ ಬೆಳೆಸಿದರೆ, ಆ ವಿದ್ಯಾರ್ಥಿಯು ದೇಶಕ್ಕೆ ಉತ್ತಮ ಪ್ರಜೆಯಾಗಿ ರೂಪಿಸಲು ಸಾಧ್ಯವಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮೊಬೈಲ್, ಟಿವಿ ನೋಡುವ ಗೀಳಿಗೆ ಬೀಳುತ್ತಿದ್ದಾರೆ. ಮಕ್ಕಳು ದೊಡ್ಡವರಾಗುತ್ತ, ಇದು ವ್ಯಸನವಾಗುವ ಸಾಧ್ಯತೆ ಇದೆ. ಹಾಗಾಗಿ ವಿದ್ಯಾರ್ಥಿಗಳು ಮೊಬೈಲ್, ಟಿವಿ ನೋಡುವ ಬದಲು ಓದು, ಕ್ರೀಡೆ, ಸಂಗೀತ, ನಾಟಕಗಳ ಕಲಿಕೆ ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕೆ ಪೋಷಕರ ಸಹಕಾರವೂ ಬೇಕು ಎಂದರು.
ನಗರಪಾಲಿಕೆ ಮಾಜಿ ಸದಸ್ಯ ಸುಬ್ಬಯ್ಯ ಮಾತನಾಡಿ, ಪ್ರತಿ ಬಡಾವಣೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸುವ ಕೆಲಸವಾಗಬೇಕು. ಅದರಂತೆ ಈ ಬಡಾವಣೆಯ 50ಕ್ಕೂ ಹೆಚ್ಚು ಪ್ರತಿಭಾವಂತ ಮಕ್ಕಳಿಗೆ ಈ ಬಡಾವಣೆ ಮುಖಂಡರು ಅಭಿನಂದಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ವಿಜಯನಗರ ಒಂದನೇ ಹಂತ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉದಯ್, ವಿ.ಎನ್.ಡೆವಲಪರ್ಸ್ ಮಾಲೀಕ ನಾಗರಾಜ್ ಭೈರಿ, ಐಶ್ಚರ್ಯ ಫೌಂಡೇಷನ್ ಅಧ್ಯಕ್ಷ ಗೋಪಾಲಸ್ವಾಮಿ, ಲಲಿತಾ ಇನ್ಟ್ರಾ ಸಲ್ಯೂಷನ್ ಮಾಲೀಕ ಎನ್.ಆರ್.ಪೂರ್ಣಚಂದ್ರ, ಪುಣ್ಯಕೋಟಿ ಸೇವಾ ಟ್ರಸ್ಟ್ ಅಧ್ಯಕ್ಷ ಹನುಮಂತೇಶ್, ಮಹಾರತ್ನ ಟ್ರಸ್ಟ್ ಸಂಸ್ಥಾಪಕ ಮೈಸೂರು ಮಹಾಲಿಂಗು, ಬಿಆರ್‌ಪಿ ಶಿವಣ್ಣ, ಕೃಷ್ಣಪ್ಪ, ಶಿವಣ್ಣ, ವಿಜಯಕುಮಾರ್ ಇತರರು ಇದ್ದರು.
ಎಸ್‌ಎಲ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರಧ್ಯುತ್, ಜೆ.ಪುನೀತ್, ಎಂ.ಯಮುನಾ, ಅನುಷ್, ಆರ್.ಗೌರವ್, ಪಿ.ಕೀರ್ತನಾ, ಎಸ್.ಪಿ.ಮೇಘನಾ, ಎಸ್.ಜಾಹ್ನವಿ, ಸಿ.ಅವಿನಾಶ್ ಗೌಡ, ಎಂ.ಎಸ್. ಶೀತಲ್, ನಿತೀಶಾ ಅವರನ್ನು ಪುರಸ್ಕರಿಸಲಾಯಿತು.
ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಅಭಿಷೇಕ್ ಕೆ.ಕುಮಾರ್, ಎಸ್.ಭವ್ಯ, ಟಿ.ಹರ್ಷಿತಾ, ಆರ್.ದಿಷಾ, ಎ.ಆದಿತಿರಾವ್, ಆರ್.ಎಸ್.ಸ್ಪಂದನ್, ಜೆ.ಹರ್ಷಿತಾ, ಎನ್.ಅನುಷಾ, ತಿಜಲ್ ತೇಜಸ್ವಿ, ಎಚ್.ತನುಶ್ರೀ, ವಿಭು ವಿಶ್ವಕರ್ಮ, ಎಸ್.ಶ್ರಾವ್ಯ, ಪಿ.ಶಾರಿಕ, ಎಂ.ಪುಷ್ಕರ, ಭರರ್ ಎಚ್.ಗಿರೀಗೌಡ ಅವರನ್ನು ಅಭಿನಂದಿಸಲಾಯಿತು.