ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದ ಎಸ್‌ಎಸ್‌ಎಲ್ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಟೈರ್ಸ್‌ ಅಸೋಷಿಯೇಷನ್ ತಾಲೂಕು ಸಮಿತಿ ವತಿಯಿಂದ ರಾಷ್ಟ್ರೀಯ ಟೈಲರ್ಸ್‌ ದಿನಾಚರಣೆ ಸಮಾರಂಭವನ್ನು ಆರ್‌ಟಿಒ ಮಲ್ಲಿಕಾರ್ಜುನ್ ಉದ್ಘಾಟಿಸಿ ಮಾತನಾಡಿದರು. ಸ್ವಾಮಿ, ಚಿಕ್ಕಮಗಳೂರು ರೆಹಮಾನ್, ಚಂದ್ರು, ಸಿದ್ದೇಗೌಡ ಮತ್ತಿತರರಿದ್ದರು. 
ಜಿಲ್ಲೆ

ಶ್ರದ್ಧೆಯಿಂದ ವೃತ್ತಿ ನಿರ್ವಹಿಸಿದರೆ ಯಶಸ್ಸು

ಕೆ.ಆರ್.ಪೇಟೆ: ತಾಲೂಕಿನ ಹೊಸಹೊಳಲು ಗ್ರಾಮದ ಎಸ್‌ಎಸ್‌ಎಲ್ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್‌ ಅಸೋಷಿಯೇಷನ್ ತಾಲೂಕು ಸಮಿತಿ ವತಿಯಿಂದ ರಾಷ್ಟ್ರೀಯ ಟೈಲರ್ಸ್‌ ದಿನಾಚರಣೆ ಸಮಾರಂಭವನ್ನು ಆಯೋಜಿಸಲಾಗಿತ್ತು.

ಸಮಾರಂಭವನ್ನು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಟೈಲರ್ಸ್‌ ವೃತ್ತಿ ಸಮಾಜದಲ್ಲಿ ಅತ್ಯಂತ ಬೇಡಿಕೆಯ ವೃತ್ತಿಯಾಗಿದೆ. ಶ್ರದ್ಧೆಯಿಂದ ಟೈಲರ್ಸ್‌ ವೃತ್ತಿ ನಿರ್ವಹಣೆ ಮಾಡಿದರೆ ಯಶಸ್ಸು ಸಾಧಿಸಬಹುದು. ಟೈಲರ್ಸ್‌ ವೃತ್ತಿ ಮಾಡುವವರಿಗೆ ಬ್ಯಾಂಕುಗಳು ಸುಲಭ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಟೈಲರ್ಸ್‌ ವೃತ್ತಿ ಬಾಂಧವರು ಸಂಘಟಿತರಾಗಿ ಸರ್ಕಾರದ ವತಿಯಿಂದ ನೀಡುತ್ತಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಕಾರ್ಮಿಕ ಇಲಾಖೆಯಲ್ಲಿ ನೀಡುವ ಅಸಂಘಟಿತ ಕಾರ್ಮಿಕರ ಕಾರ್ಡುಗಳನ್ನು ಪಡೆದುಕೊಳ್ಳಬೇಕು. ಈ ಕಾರ್ಮಿಕರ ಕಾರ್ಡು ಇದ್ದರೆ ಆಕಸ್ಮಿಕ ಘಟನೆಗಳಿಗೆ ಕಾರ್ಮಿಕರು ತುತ್ತಾದರೆ ವಿಮಾ ಪರಿಹಾರವನ್ನು ವಿಮಾ ಕಂಪನಿಯಿಂದ ಪಡೆದುಕೊಳ್ಳಬಹುದು. ಟೈಲರ್‌ಗಳು ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬಾರದು. ಮದ್ಯಪಾನ-ಧೂಮಪಾನ ದುಶ್ಚಟಗಳಿಂದ ದೂರವಿರಬೇಕು. ಕ್ರಿಯಾಶೀಲವಾಗಿ ಟೈಲರಿಂಗ್ ವೃತ್ತಿಯನ್ನು ಅರ್ಪಣಾ ಭಾವನೆಯಿಂದ ಮಾಡಿದರೆ ಯಶಸ್ವಿಯಾಗಬಹುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಟೈಲರ್ಸ್‌ ಅಸೋಷಿಯೇಷನ್ ತಾಲೂಕು ಸಮಿತಿಯ ಅಧ್ಯಕ್ಷ ಎಚ್.ಕೆ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಕಾರ್ಮಿಕ ನಿರೀಕ್ಷಕ ಸ್ವಾಮಿ ಅಸಂಘಟಿತ ಕಾರ್ಮಿಕರಿಗೆ ಹಾಗೂ ಟೈಲರ್‌ಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಟೈರ್ಸ್‌ ಸಂಘದ ಸದಸ್ಯರಿಗೆ ಉಚಿತವಾಗಿ ಕಾರ್ಮಿಕರ ಕಾರ್ಡುಗಳನ್ನು ನೀಡಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಟೈರ್ಸ್‌ ಅಸೋಷಿಯೇಷನ್ ರಾಜ್ಯ ಸಮಿತಿ ಉಪಾಧ್ಯಕ್ಷ ಚಿಕ್ಕಮಗಳೂರು ರೆಹಮಾನ್, ಮೈಸೂರು ವಲಯ ಸಮಿತಿ ಅಧ್ಯಕ್ಷ ಚಂದ್ರು, ಮಾಜಿ ಅಧ್ಯಕ್ಷ ಸಿದ್ದೇಗೌಡ, ತಾಲೂಕು ಜವಳಿ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ಕುಮಾರ್ ಟೆಕ್ಸ್‌ಟೈಲ್ಸ್ ಕುಮಾರ್, ಶ್ರೀರಂಗಪಟ್ಟಣ ತಾಲೂಕು ಟೈರ್ಸ್‌ ಸಂಘದ ಅಧ್ಯಕ್ಷ ರಜನಿಕಾಂತ್, ತಾಲೂಕು ಘಟಕದ ಉಪಾಧ್ಯಕ್ಷ ಕೃಷ್ಣ, ಮಹಿಳಾ ಉಪಾಧ್ಯಕ್ಷೆ ಸುನಿತಾ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ, ಖಜಾಂಚಿ ಶ್ಯಾಮ್, ಸಂಘಟನಾ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ, ಜ್ಯೋತಿ, ಉಮಾ, ಮಾಧ್ಯಮ ಕಾರ್ಯದರ್ಶಿ ವಿ.ಲೋಕೇಶ್ ಮತ್ತಿತರರು ಭಾಗವಹಿಸಿದ್ದರು.

60ವರ್ಷ ಮೇಲ್ಪಟ್ಟ ಹಿರಿಯ ಟೈಲರ್ ವೃತ್ತಿ ಮಾಡುತ್ತಾ ಜೀವನ ನಡೆಸುತ್ತಿರುವ ಹೊಸಹೊಳಲು ಸಿದ್ದಯ್ಯ, ಕೆ.ಆರ್.ಪೇಟೆ ಮಹಾದೇವ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.