ಹಲಗೂರಿನ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುಪಿಎಸ್‌ಸಿ ಸಾಧಕ ಬಿ.ಎಸ್. ಚಂದನ್ ಅವರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ನಿರಂತರ ಪ್ರಯತ್ನದಿಂದ ಮುಂದಿನ ಜೀವನ ಸಫಲ

ಹಲಗೂರು: ಯಾವುದೇ ಒಂದು ಉತ್ತಮವಾದ ಕೆಲಸ ಮಾಡಬೇಕಾದರೆ ಹಾಗೂ ಒಳ್ಳೆಯ ದಾರಿ ಆರಿಸಿಕೊಳ್ಳಬೇಕಾದರೆ ನಾವು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೆ ಮಾತ್ರ ನಮ್ಮ ಮುಂದಿನ ಜೀವನ ಸಫಲವಾಗಲಿದೆ ಎಂದು ಯುಪಿಎಸ್‌ಸಿಯಲ್ಲಿ 731ನೇ ರ‌್ಯಾಂಕ್ ಪಡೆದ ಬಿ.ಎಸ್.ಚಂದನ್ ತಿಳಿಸಿದರು.

ಇಲ್ಲಿನ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಹಾಗೂ ಗುರು ವೃಂದದವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ನಾವು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಹಾಗೂ ಹಳ್ಳಿಗಾಡಿನ ಜನರು ಎಂಬ ಕೀಳರಿಮೆ ಬೆಳೆಸಿಕೊಳ್ಳಬಾರದು. ನಮ್ಮಲ್ಲಿ ಸಾಧನೆ ಮಾಡುವ ಛಲ ಇದ್ದೇ ಇರುತ್ತದೆ. ನಾವು ಧೃತಿಗೆಡದೆ ಮುನ್ನುಗ್ಗಬೇಕಾಗಿದೆ. ಜೀವನದಲ್ಲಿ ಸೋಲು, ಗೆಲುವು ಎಂಬುದು ಸಾಮಾನ್ಯ. ನಿರಂತರವಾಗಿ ಪ್ರಯತ್ನ ಮಾಡದಿದ್ದರೆ ಅದು ಸಫಲವಾಗುವುದಿಲ್ಲ. ಮುಂದೆ ಗುರಿ ಇಟ್ಟುಕೊಂಡು ನಾವು ಶ್ರಮಪಟ್ಟರೆ ಮಾತ್ರ ನಮಗೆ ಫಲ ದೊರಕುತ್ತದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ಚಂದನ್, ಅವರ ತಾಯಿ ಸವಿತಾ, ಅಣ್ಣ ಚೇತನ್ ಅವರನ್ನು ಬೆಳ್ಳಿ ರಥದ ಸಾರೋಟಿನಲ್ಲಿ ಪಬ್ಲಿಕ್ ಶಾಲಾ ಆವರಣದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಿ ಗೌರಿಶಂಕರ ಕಲ್ಯಾಣ ಮಂಟಪಕ್ಕೆ ಕರೆ ತರಲಾಯಿತು.

ಮಂಡ್ಯ ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಮಾಡುತ್ತಿರುವುದು ಮಳವಳ್ಳಿ ತಾಲೂಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೇ ಆಗಲಿ, ಬೇರೆ ಯಾವುದೇ ವಿಷಯಗಳಲ್ಲೇ ಆಗಲಿ ಮಳವಳ್ಳಿ ತಾಲೂಕು ಮುಂದೆ ಇದೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಕನ್ನಡ ಮಾತ್ರ ಬರುತ್ತದೆ, ಇಂಗ್ಲಿಷ್ ಬರುವುದಿಲ್ಲ ಎಂದುಕೊಳ್ಳುತ್ತೇವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ತಮ್ಮ ಮನೆಯಲ್ಲಿರುವ ಬಡತನದ ಅರಿವಿರುತ್ತದೆ. ಆ ಮಕ್ಕಳಲ್ಲಿ ಹೆಚ್ಚಿನ ಛಲ, ಪರಿಶ್ರಮವಿರುತ್ತದೆ. ನಮ್ಮ ತಂದೆ, ತಾಯಿ ತುಂಬಾ ಕಷ್ಟಪಡುತ್ತಿದ್ದಾರೆ, ನಾವು ಏನನ್ನಾದರೂ ಸಾಧನೆ ಮಾಡಬೇಕೆಂಬ ಭಾವನೆ ಇರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕೆಂಬುದು ನಿಮ್ಮಗಳ ಕನಸಾಗಿರಬೇಕು. ಅದನ್ನು ಪ್ರಯತ್ನಿಸಿದರೆ ಮುಂದಿನ ದಿವಸಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಸಾಧ್ಯವಾಗಲಿದೆ ಎಂದು ಹೇಳಿದರು.

ನೀವು ನಿಮ್ಮ ಊರಿನ ನ್ಯಾಯಬೆಲೆ ಅಂಗಡಿಗಳನ್ನು ಮುಚ್ಚಲು ಹೇಗೆ ಬಿಡುವುದಿಲ್ಲವೋ, ಹಾಗೆಯೇ ನಿಮ್ಮ ಊರಿನ ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡಬಾರದು. ನ್ಯಾಯಬೆಲೆ ಅಂಗಡಿ ಮುಚ್ಚಿ ಹೋದರೆ ಬಡವರ ಹಸಿವು ಹೆಚ್ಚಾಗುತ್ತದೆ. ಸರ್ಕಾರಿ ಶಾಲೆ ಮುಚ್ಚಿ ಹೋದರೆ ನಿಮ್ಮ ಜೇಬು ಖಾಲಿಯಾಗುತ್ತದೆ. ಗ್ರಾಮಾಂತರ ಪ್ರದೇಶದ ವ್ಯಕ್ತಿಗಳಿಗೆ ಶ್ರೀಸಾಮಾನ್ಯರ ಸಮಸ್ಯೆಗಳ ಬಗ್ಗೆ ಅರಿವಿರುವುದರಿಂದ ಅದಕ್ಕೆ ಸ್ಪಂದಿಸುವಂತಹ ವಿಶಾಲ ಮನೋಭಾವನೆ ಇರುತ್ತದೆ. ಆಡಳಿತಾತ್ಮಕ ವಿಷಯಗಳಲ್ಲಿ ಅವರು ಆಯ್ಕೆಯಾಗಿ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾದರೆ ಅವರು ಸಮಾಜದ ಯೋಗಕ್ಷೇಮಕ್ಕಾಗಿ ನಿರಂತರವಾಗಿ ಚಿಂತಿಸಬಲ್ಲರು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಡಾ.ಲಕ್ಷ್ಮೀಅಶ್ವಿನ್‌ಗೌಡ ಮಾತನಾಡಿ, ಹಲಗೂರು ಹೋಬಳಿಯ ಹಳ್ಳಿಗಾಡಿನ ಚಂದನ್ ಅವರು ಬೀರೂಟ ಗ್ರಾಮದಲ್ಲಿ ಹುಟ್ಟಿ ಸರ್ಕಾರಿ ಶಾಲೆಯಲ್ಲಿ ಓದಿ, ಇಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿರುವುದು ಹಮ್ಮೆಯ ಸಂಗತಿ. ರೈತ ಕುಟುಂಬದಲ್ಲಿ ಹುಟ್ಟಿ ನಾಗರಿಕ ಪರೀಕ್ಷೆ ಪಾಸು ಮಾಡುವುದು ಕಬ್ಬಿಣದ ಕಡಲೆ ಹಾಗೆ ಎನ್ನುವ ಕಾಲದಲ್ಲಿ ಈ ಪರೀಕ್ಷೆಯನ್ನು ಯಾರಾದರೂ ಪಾಸ್ ಮಾಡಬಹುದು, ಅದಕ್ಕೆ ಶ್ರಮಪಡಬೇಕು ಎಂಬುದನ್ನು ತೋರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎ.ಎಸ್.ದೇವರಾಜು, ಎ.ಟಿ. ಶ್ರೀನಿವಾಸ್, ಬಸವರಾಜು, ಪುಟ್ಟಸ್ವಾಮಿ, ಕೃಷ್ಣ, ಹೋಟೆಲ್ ಗಿರೀಶ್, ಮನೋಹರ, ಬಿ.ಕೆ.ಕೆಂಪರಾಜು, ಮುನಿರಾಜು, ಎನ್.ಕೆ.ಕುಮಾರ್, ಸುರೇಶ್, ಭಾಸ್ಕರ್ ಇತರರು ಇದ್ದರು.