ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಹೆಚ್ಚುತ್ತಿರುವ ಸಂಚಾರದಟ್ಟಣೆ ನಿವಾರಿಸಲು ಸಬರ್ಬನ್ ರೈಲು (ಉಪನಗರ) ಯೋಜನೆ ಜಾರಿಗೊಳಿಸುತ್ತಿದ್ದು, 3 ವರ್ಷದೊಳಗೆ ಅನುಷ್ಠಾನಗೊಳಿಸುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೇಂದ್ರ ಸರ್ಕಾರ ಬಜೆಟ್ನಲ್ಲಿ ಬೆಂಗಳೂರಿಗೆ ಸಬರ್ಬನ್ ರೈಲು ಯೋಜನೆ ಘೊಷಿಸಿದ್ದು, 18,600 ಕೋಟಿ ರೂ. ಅಂದಾಜು ವೆಚ್ಚ ನಿಗದಿಪಡಿಸಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮುಂದಿನ ಮೂರು ವರ್ಷಗಳಲ್ಲಿ ರೈಲನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.20, ರಾಜ್ಯ ಸರ್ಕಾರ ಶೇ.20 ಆರ್ಥಿಕ ನೆರವು ನೀಡಿದರೆ, ಉಳಿದ ಶೇ.60 ಹಣವನ್ನು ಸಾಂಸ್ಥಿಕ ಸಂಸ್ಥೆಗಳಿಂದ ಸಾಲ ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ರೈಲು ಒಟ್ಟು 148.17 ಕಿ.ಮೀ. ದೂರ ಕ್ರಮಿಸಲಿದೆ ಎಂದು ತಿಳಿಸಿದರು.
ಬಜೆಟ್ನಲ್ಲಿ ಯೋಜನೆ ಘೋಷಿಸಿದ ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಯೋಜನೆ ಅನುಷ್ಠಾನಕ್ಕೆ ಸಹಕರಿಸಿದ ಹಿಂದಿನ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಅಭಿನಂದಿಸಿದರು.
ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಮಾತನಾಡಿ, ಬೆಂಗಳೂರು ನಗರಕ್ಕೆ ಸಬರ್ಬನ್ರೈಲು ಯೋಜನೆಯನ್ನು ಬಜೆಟ್ನಲ್ಲೇ ಘೊಷಣೆ ಮಾಡಿರುವುದರಿಂದ ನಮಗೆ ಸಾಂಸ್ಥಿಕ ಸಂಸ್ಥೆಗಳಿಂದ ಸಾಲ ಪಡೆಯಲು ಹಾಗೂ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣ ಆಧುನೀಕರಣ ಕಾಮಗಾರಿ ಮಾರ್ಚ್ ಒಳಗೆ ಪೂರ್ಣಗೊಳ್ಳಲಿದ್ದು, ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಸಂಸದ ಪಿ.ಸಿ. ಮೋಹನ್ ಮಾತನಾಡಿ, ಬೆಂಗಳೂರಿನಲ್ಲಿ ಸಬರ್ಬನ್ ರೈಲು ಯೋಜನೆ ಅನುಷ್ಠಾನಗೊಳಿಸಬೇಕು ಎಂಬುದು ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ್ಕುಮಾರ್ ಕನಸಾಗಿತ್ತು. ಇದಕ್ಕಾಗಿ ಅವರು ಅನೇಕ ಬಾರಿ ಪ್ರಯತ್ನ ನಡೆಸಿದ್ದರು. ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ರೈಲ್ವೆ ಸಚಿವರಾದ ಸುರೇಶ್ ಅಂಗಡಿ ವಿಶೇಷ ಆಸಕ್ತಿ ವಹಿಸಿದ್ದರಿಂದ ಅನುಷ್ಠಾನಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ ಮತ್ತು ಉನ್ನತ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು ಹೊರವರ್ತಲ ರಸ್ತೆಯಂತೆ ನಗರದ ಸುತ್ತಲೂ 148.17 ಕಿಮೀ ರೈಲು ಮಾರ್ಗ ನಿರ್ಮಾಣ ಸಬರ್ಬನ್ ರೈಲು ಯೋಜನೆಯಲ್ಲಿದೆ. ಈ ಮಾರ್ಗದಲ್ಲಿ 55 ಕಿ.ಮೀ. ಮಾರ್ಗವು ಎಲಿವೇಟೆಡ್ ಆಗಿರಲಿದೆ.
ಬೈಯಪ್ಪನಹಳ್ಳಿ-ಬಾಣಸವಾಡಿ- ಯಶವಂತಪುರ 25.1 ಕಿ.ಮೀ. ಕೆಂಗೇರಿ-ಕಂಟೋನ್ಮೆಂಟ್- ವೈಟ್ಫೀಲ್ಡ್ - 35.52 ಕಿ.ಮೀ. ಮಾಗಡಿ ರಸ್ತೆ-ಯಶವಂತಪುರ-ಯಲಹಂಕ-ವಿಮಾನ ನಿಲ್ದಾಣ 41.4 ಕಿಮೀ ಹೀಲಲಿಗೆ-ಬೈಯಪ್ಪನಹಳ್ಳಿ-ಯಲಹಂಕ- ರಾಜಾನುಕುಂಟೆ 46.24 ಕಿಮೀ
ಸಬರ್ಬನ್ ರೈಲುಗಳು ಬೆಳಗ್ಗೆ 5 ರಿಂದ ಮಧ್ಯರಾತ್ರಿಯವರೆಗೂ ಸಂಚರಿಸಲಿವೆ. ಈ ರೈಲು ಹವಾನಿಯಂತ್ರಿತ ಬೋಗಿ ಒಳಗೊಂಡಿರುತ್ತವೆ. 57 ರೈಲುನಿಲ್ದಾಣಗಳನ್ನು ನಿರ್ವಿುಸಲು ಉದ್ದೇಶಿಸಲಾಗಿದೆ. ಈಗಾಗಲೇ 103 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರದಿಂದ ಅಗತ್ಯವಿರುವ ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿದಿದೆ ಎಂದು ಹೇಳಿದರು. ಸಬರ್ಬನ್ ರೈಲು ಯೋಜನೆ ಈ ಹಿಂದೆಯೇ ಯೋಜನೆ ಅನುಷ್ಠಾನವಾಗಬೇಕಿತ್ತು. ಆದರೆ, ಕೆಲವು ಕಾರಣಗಳಿಂದ ಮುಂದೂಡಿಕೆಯಾಗಿತ್ತು. ಈಗ ಬಜೆಟ್ನಲ್ಲಿ ಘೊಷಣೆ ಮಾಡಿರುವುದರಿಂದ ಸಂಚಾರ ದಟ್ಟಣೆ ನೀಗಿ ತ್ವರಿತವಾಗಿ ಪ್ರಯಾಣಿಕರು ನಿಗದಿತ ಸ್ಥಳ ತಲುಪಲು ಅನುಕೂಲವಾಗುತ್ತದೆ. ಜತೆಗೆ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ ಎಂದರು.