ಜಿಲ್ಲೆ

ಸಬ್‌ಸ್ಟೇಷನ್ ಕಾಮಗಾರಿ ವಿಳಂಬ : ಟೆಂಡರ್ ಆಗಿ 6 ತಿಂಗಳು ಕಳೆದರೂ ಶುರುವಾಗಿಲ್ಲ ಕಾಮಗಾರಿ

ಸೌಮ್ಯ ಆರ್

ಮನೋಹರ್ ಬಳಂಜ ಬೆಳ್ತಂಗಡಿ ಉಜಿರೆಯಲ್ಲಿ 33/11 ಕೆವಿ ವಿದ್ಯುತ್ ಉಪ ಕೇಂದ್ರದ ಕಾಮಗಾರಿ ಆರಂಭಕ್ಕೆ ಮೀನ-ಮೇಷ ಮುಂದುವರಿದಿದೆ. ಎರಡು ವರ್ಷಗಳಿಂದ ಉಜಿರೆಯ ನಿನ್ನಿಕಲ್ಲಿನಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಿಸುವ ಬಗ್ಗೆ ಸಾಕಷ್ಟು ತಯಾರಿ ನಡೆದಿದೆ. ಆದರೆ ಕಾಮಗಾರಿ ಆರಂಭಕ್ಕೆ ಮುಹೂರ್ತ ಕೂಡಿ ಬಂದಿಲ್ಲ. 0.96 ಎಕರೆ ಸ್ಥಳ ವಿದ್ಯುತ್ ಉಪ ಕೇಂದ್ರ ನಿರ್ಮಿಸಲು ಗುರುತಿಸಲಾಗಿದ್ದು, ಇದಕ್ಕೆ ಸಂಬಂಧಪಟ್ಟ ನಿಗದಿತ ಶುಲ್ಕ ಪಾವತಿಸಿ ವರ್ಷ ಕಳೆದಿದೆ. ಇಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಿಸುವ ಕುರಿತು ಪ್ರತಿ ಬಾರಿ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಭರವಸೆ ಸಿಗುತ್ತಿದೆ ಮತ್ತು ಗ್ರಾಮಸಭೆಯಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 6 ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಬೆಳ್ತಂಗಡಿ ಉಪವಿಭಾಗದಿಂದ ಉಜಿರೆ ಉಪವಿಭಾಗಕ್ಕೆ ಸದ್ಯ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಉಜಿರೆಯಲ್ಲಿ ಉಪಕೇಂದ್ರ ನಿರ್ಮಾಣವಾದರೆ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿದ ಹೊರೆ: ಉಜಿರೆಯ ಪ್ರತ್ಯೇಕ ವಿದ್ಯುತ್ ಉಪಕೇಂದ್ರದ ವ್ಯವಸ್ಥೆ ಇಲ್ಲದ ಕಾರಣ ವಿದ್ಯುತ್ ಹೊರೆ ಹೆಚ್ಚಾಗುತ್ತಿದೆ. ಇದರಿಂದ ತಂತಿಗಳು ಕಡಿದು ಬೀಳುವುದು, ಪರಿವರ್ತಕಗಳಲ್ಲಿ ಫ್ಯೂಸ್ ಹೋಗುವುದು, ಓವರ್‌ಲೋಡ್ ಇತ್ಯಾದಿ ಸಮಸ್ಯೆಯಾಗುತ್ತಿದೆ. ವಿದ್ಯುತ್ ಹೊರೆ ಸಮರ್ಪಕವಾಗಿ ನಿರ್ವಹಿಸಲು ಪವರ್ ಕಟ್, ರೋಸ್ಟರ್, ಲೋಡ್‌ಶೆಡ್ಡಿಂಗ್ ಅನಿವಾರ್ಯವಾಗಿದೆ. ಉಜಿರೆ ಮತ್ತು ಬೆಳಾಲು ಫೀಡರ್‌ಗಳಿವೆ. ಇದರಲ್ಲಿ ಉಜಿರೆ ನಗರ ಫೀಡರ್ ಆಗಿದ್ದರೆ ಬೆಳಾಲು ಗ್ರಾಮಾಂತರ ಫೀಡರ್ ಆಗಿದೆ. ಈ ಎರಡು ಫೀಡರ್‌ಗಳಲ್ಲಿ ಭಾರಿ ಸಮಸ್ಯೆ ಕಂಡು ಬರುತ್ತಿವೆ. ಈ ವ್ಯಾಪ್ತಿಯಲ್ಲಿ ಹೆಚ್ಚಿನ ಕೃಷಿಕರಿದ್ದು, ವಿದ್ಯುತ್ ಕಡಿತ ತಲೆ ನೋವಾಗಿ ಪರಿಣಮಿಸಿದೆ. ಮೆಸ್ಕಾಂ ಹರಸಾಹಸ ಉಜಿರೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಿದ್ಯುತ್ ಪೂರೈಸಲು ಮೆಸ್ಕಾಂ ಹರಸಾಹಸ ನಡೆಸುತ್ತಿದೆ. ಇತರ ಫೀಡರ್‌ಗಳಿಂದ ಉಜಿರೆ ಬೆಳಾಲು ಫೀಡರ್ ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ನೀಡಲು ಸಾಕಷ್ಟು ವ್ಯವಸ್ಥೆಗಳನ್ನು ಕೈಗೊಂಡರೂ ಅದು ಪೂರ್ಣಪ್ರಮಾಣದಲ್ಲಿ ಫಲ ನೀಡುತ್ತಿಲ್ಲ. ಈ ಕಾರಣದಿಂದ ಉಜಿರೆಯ ನಿನ್ನಿಕಲ್ಲಿನ ಉಪಕೇಂದ್ರ ಶೀಘ್ರ ನಿರ್ಮಾಣ ಅಗತ್ಯ.

ಉಜಿರೆಯ 33/11ಕೆವಿ ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿ ಆರಂಭಿಸುವ ಕುರಿತು ತಕ್ಷಣ ಪರಿಶೀಲನೆ ನಡೆಸಲಾಗುವುದು. ಜಯಕುಮಾರ್, ಎಂಡಿ ಮೆಸ್ಕಾಂ ಆಗಾಗ ಉಂಟಾಗುವ ಅನಧಿಕೃತ ವಿದ್ಯುತ್ ಕಡಿತದಿಂದ ಕೃಷಿಕರಿಗೆ ಭಾರಿ ತೊಂದರೆ ಉಂಟಾಗುತ್ತಿದೆ. ವೇಳಾಪಟ್ಟಿ ಇಲ್ಲದ ವಿದ್ಯುತ್ ಕಡಿತದಿಂದ ಗ್ರಾಹಕರು ಹೈರಾಣರಾಗಿದ್ದಾರೆ. ಉಜಿರೆಯಲ್ಲಿ ಉಪಕೇಂದ್ರ ನಿರ್ಮಾಣವಾದರೆ ಹೆಚ್ಚಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ರಾಧಾಕೃಷ್ಣ ಭಟ್, ಕೃಷಿಕ ಉಜಿರೆ https://www.vijayavani.net/science-is-essential-for-development https://www.vijayavani.net/science-is-essential-for-development