ಜಿಲ್ಲೆ

ಭರಪೂರ ಅರ್ಜಿಗಳು ಸಲ್ಲಿಕೆ, ಬೆರಳೆಣಿಕೆಯಲ್ಲಿ ಫಲಾನುಭವಿಗಳ ಆಯ್ಕೆ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಪ್ರೋತ್ಸಾಹಿಸುವ ಯೋಜನೆಗಳಿಗೆ ಭರಪೂರ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು ಆಯ್ಕೆ ಫಲಾನುಭವಿಗಳ ಸಂಖ್ಯೆಯು ಮಾತ್ರ ಬೆರಳೆಣಿಕೆಯಲ್ಲಿದೆ. ಕಳೆದ 2023-24 ನೇ ಸಾಲಿನ ಉದ್ಯೋಗಿನಿ ಯೋಜನೆಯಡಿ ಜಿಲ್ಲೆಯಲ್ಲಿ 21 ಗುರಿಯನ್ನು ನಿಗದಿಪಡಿಸಿದ್ದು ಬರೋಬ್ಬರಿ 3817 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನು ಆಯ್ಕೆಯಾದ ಲಾನುಭವಿಗಳ ಪೈಕಿ 13 ಮಂದಿಗೆ ಬ್ಯಾಂಕುಗಳಿಂದ ನಿಯಮಾನುಸಾರ ಸಾಲ ಮಂಜೂರಾಗಿದೆ. ಉಳಿದಂತೆ 8 ಮಂದಿ ಸೌಲಭ್ಯದ ನಿರೀೆಕ್ಷೆಯಲ್ಲಿದ್ದಾರೆ.

*ವಿವಿಧ ಯೋಜನೆಗಳು

ಲೈಂಗಿಕ ವೃತ್ತಿ ನಿರತ ಮಹಿಳೆಯರು, ಎಚ್​.ಐ.ವಿ.ಸೋಂಕಿತರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ವಲಯಗಳ ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಿದೆ. ಉದ್ಯೋಗಿನಿ ಯೋಜನೆಯಡಿ ನಿರುದ್ಯೋಗಸ್ಥೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ 3 ಲಕ್ಷ ರೂವರೆಗೂ ಬ್ಯಾಂಕ್​ ಸಾಲವನ್ನು ಕೊಡಿಸಲಾಗುತ್ತದೆ. ಇದಕ್ಕೆ ಮಹಿಳಾ ಅಭಿವೃದ್ಧಿ ನಿಮಗದಿಂದ ಸಾಮಾನ್ಯ ವರ್ಗದವರಿಗೆ, ವಿಶೇಷ ವರ್ಗದವರಿಗೆ ಶೇ.30 ರಷ್ಟು, ಎಸ್ಸಿ ಎಸ್ಟಿ ಲಾನುಭವಿಗಳಿಗೆ ಶೇ.50 ರಷ್ಟು ಸಹಾಯ ಧನವನ್ನು ನೀಡಲಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್​ ವಸತಿ ಸಲ್ಲಿಸುವ ಚೇತನಾ ಯೋಜನೆಯಡಿ ನೇರವಾಗಿ 30 ಸಾವಿರ ರೂಗಳು ಆರ್ಥಿಕ ನೆರವು, ಧನಶ್ರೀ ಯೋಜನೆಯಡಿ ಎಚ್​ಐವಿ ಸೋಂಕಿತರು, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದು ಸಂಕಷ್ಟಕ್ಕೊಳಗಾಗಿರುವ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನೇರವಾಗಿ 30 ಸಾವಿರ ರೂ, ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಗೌರವಯುತ ಜೀವನ ನಡೆಸುವಂತಾಗಲು 30 ಸಾವಿರ ರೂ, ನೀಡಲಾಗುತ್ತದೆ. ಮಹಿಳಾ ತರಬೇತಿ ಯೋಜನೆಯಡಿ ಮಹಿಳೆಯರಿಗೆ ಟೈಲರಿಂಗ್​, ಬ್ಯೂಟಿ ಪಾರ್ಲರ್​, ಕಂಪ್ಯೂಟರ್​, ಪ್ರಿಂಟಿಂಗ್​ ಶಿಕ್ಷಣ, ಗಾರ್ಮೆಂಟ್ಸ್​, ಕಸೂತಿ ಸೇರಿದಂತೆ ಕೌಶಲ ತರಬೇತಿ ನೀಡಿ, ಉದ್ದಿಮೆಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುತ್ತಿದೆ.