ಜಿಲ್ಲೆ

ಪಿಎಂಎಫ್​​ಎಂಇ ಯೋಜನೆಯಡಿ 3 ಕೋಟಿವರೆಗೆ ಸಬ್ಸಿಡಿ: ಸದ್ಬಳಕೆಗಾಗಿ ರೈತರಿಗೆ ಚಲುವರಾಯಸ್ವಾಮಿ ಸಲಹೆ

ಬೆಂಗಳೂರು: ಕೃಷಿ ಕ್ಷೇತ್ರವು ಹವಾಮಾನ ವೈಪರೀತ್ಯ,ಬೆಳೆನಷ್ಟ, ಬೆಲೆಕುಸಿತ ಸೇರಿ ಹಲವು ಸವಾಲು ಎದುರಿಸುತ್ತಿದೆ. ಆರ್ಥಿಕ ಸ್ವಾವಲಂಬನೆಗಾಗಿ ‘ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ( ಪಿಎಂಎಫ್​​ಎಂಇ)’ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ರೈತರಿಗೆ ಸಲಹೆ ನೀಡಿದ್ದಾರೆ.

ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್), ಟೌನ್‌ಹಾಲ್‌ನ ಪುರಭವನದಲ್ಲಿ ಗುರುವಾರ ಆಯೋಜಿಸಿದ್ದ ‘ರೈತ ಉತ್ಪಾದಕ ಸಂಸ್ಥೆಗಳ ತಾಂತ್ರಿಕ ಸಮ್ಮೇಳನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ 5 ಸಾವಿರ ಆಹಾರ ಸಂಸ್ಕರಣಾ ಘಟಕ ತೆರೆಯಲು ಗುರಿ ಹಾಕಿಕೊಂಡಿದ್ದೇವೆ. ಇದಕ್ಕಾಗಿ 206 ಕೋಟಿ ರೂ.ಮೀಸಲಿಟ್ಟಿದ್ದೇವೆ. ಈ ಯೋಜನೆಯಡಿ ಕೃಷಿ ಉತ್ಪಾದಕ ಸಂಸ್ಥೆಗಳು, ರೈತರ ಗುಂಪು, ಸ್ವಸಹಾಯ ಸಂಘ, ಸಹಕಾರ ಸೊಸೈಟಿಗಳಿಗೆ ಘಟಕ ಸ್ಥಾಪನೆಗೆ ಗರಿಷ್ಠ 3 ಕೋಟಿ ರೂ. ವರಗೆ ಸಬ್ಸಿಡಿ ನೀಡಲಾಗುತ್ತಿದೆ. ಈ ಯೋಜನೆಗೆ ರಾಜ್ಯ ಸರ್ಕಾರವು ಶೇ.15 ಹೆಚ್ಚುವರಿ ಸಹಾಯಧನ ನೀಡುತ್ತಿದೆ.ಕೇಂದ್ರ,ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳಿಗೆ ಸಹಾಯಧನವನ್ನು ಒದಗಿಸುತ್ತಿದೆ. ಇಂತಹ ಯೋಜನೆಗಳನ್ನು ಹೆಚ್ಚಿನ ಸಂಖ್ಯೆಯ ಯುವ ರೈತರು ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.

5 ವರ್ಷದಲ್ಲಿ ಪಿಎಂಎಫ್​​ಎಂಇ ಯೋಜನೆಯಡಿ 6,500 ಅರ್ಜಿಗಳಿಗೆ ಬ್ಯಾಂಕ್ ಸಾಲ, ಸಬ್ಸಿಡಿ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ 4,400 ಅರ್ಜಿಗಳು ಸ್ವೀಕೃತವಾಗಿವೆ. ಕಬ್ಬು ಕಟಾವು ಯಂತ್ರಕ್ಕೆ 50 ಲಕ್ಷ ರೂ.ವರೆಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಬಾಗಲಕೋಟೆ, ಬೆಳಗಾವಿ, ಬೀದರ್ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈವರೆಗೆ 400 ರೈತರಿಗೆ ಯಂತ್ರ ವಿತರಿಸಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಸಮರ್ಪಕವಾಗಿ ನಿಭಾಯಿಸುತ್ತಿದ್ದೇವೆ ಎಂದು ಚಲುವರಾಯಸ್ವಾಮಿ ಹೇಳಿದರು.

ಇದೇ ವೇಳೆ ಪಿಎಂಎಫ್​​ಎಂಇ ಯೋಜನೆ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಯೋಜನೆ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಲಾಯಿತು. ಬ್ಯಾಂಕ್‌ನಿಂದ ಸಾಲ ಸೌಲಭ್ಯ ಪಡೆದುಕೊಳ್ಳಲು ಅನುಸರಿಸಬೇಕಾದ ಕ್ರಮ, ಸಿರಿಧಾನ್ಯ, ಹಣ್ಣು, ತರಕಾರಿ, ಧಾನ್ಯ, ಸಾಂಬಾರು ಉತ್ಪನ್ನ, ಪಶುಸಂಗೋಪನೆ, ಡೇರಿ, ಮೀನುಗಾರಿಕೆ ಕ್ಷೇತ್ರಗಳಲ್ಲಿನ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಅವಕಾಶ ಕುರಿತು ತಜ್ಞರು ವಿಚಾರ ಮಂಡಿಸಿದರು. ಕೆಪೆಕ್ ಪ್ರಧಾನ ವ್ಯವಸ್ಥಾಪಕ ಡಾ.ಎಚ್.ಕೆ.ಶಿವಕುಮಾರ್, ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಅಧ್ಯಕ್ಷ ವೈ. ಸಯೀದ್ ಅಹ್ಮದ್ ಸೇರಿ ಮತ್ತಿತರರಿದ್ದರು.

ಕಾಪಿ ಮಾಡಿದ ಕೇಂದ್ರ ಸರ್ಕಾರ

ಜನರ ಬದುಕಿಗಾಗಿ ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ, ಈ ಯೋಜನೆಗಳ ಬಗ್ಗೆ ಕುಹುಕುವಾಡಿ ಆರ್ಥಿಕ ದಿವಾಳಿಯಾಗಲಿದೆ ಎಂದು ಟೀಕಿಸಿದ್ದರು. ಆದರೆ,ದೆಹಲಿ,ಬಿಹಾರದಲ್ಲಿ ಕೇಂದ್ರ ಸರ್ಕಾರವೇ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಸಿಎಂ ಸಿದ್ದರಾಮಯ್ಯ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸದೆ ಗ್ಯಾರಂಟಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ, ದೇಶದ ಅಭಿವೃದ್ಧಿಗೆ ಪೆಟ್ಟು ಬೀಳಲಿದೆ ಎಂದರು.

ಪಿಎಂಎಫ್​​ಎಂಇ ಯೋಜನೆಗಳಿಂದ ಹಲವು ಪ್ರಯೋಜನಗಳಿವೆ. ರೈತರ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಬೇಕು. ಆಹಾರ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿದರೆ ಹೆಚ್ಚಿನ ಬೆಲೆಯೂ ದೊರೆಯಲಿದೆ. ಹಾಗಾಗಿ, ದೊಡ್ಡ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ರೈತರು ಉದ್ಯಮಿಯಾಗುವ ಮಾತ್ರವಲ್ಲದೆ ಉದ್ಯೋಗದಾತರಾಗಬೇಕು.

- ಹರೀಶ್,ಕೆಪೆಕ್ ಅಧ್ಯಕ್ಷ

ಸ್ಥಳೀಯ ಆಹಾರ ಉತ್ಪನ್ನಗಳನ್ನು ಕೇಂದ್ರೀಕರಿಸಿ ರೈತರು, ಆಹಾರ ಸಂಸ್ಕರಣಾ ಘಟಕ ತೆರೆಯಲು ಮುಂದಾಗಬೇಕು.ಇದರಿಂದ ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿಕೊಳ್ಳಬಹುದು. ಘಟಕ ಆರಂಭಿಸಲು ಬ್ಯಾಂಕಿನಲ್ಲಿ ಕೆಪೆಕ್ ಸಾಲ ಕೊಡಿಸಲಿದೆ. ಜೊತೆಗೆ, ಸಬ್ಸಿಡಿ ನೀಡಲಾಗುವುದು. ಸಾಲ ಮಂಜೂರಾತಿಗಾಗಿ 4,300 ಅರ್ಜಿಗಳನ್ನು ಬ್ಯಾಂಕಿಗೆ ಕಳುಹಿಸಲಾಗಿದೆ.

- ಸಿ.ಎನ್.ಶಿವಪ್ರಕಾಶ್, ಕೆಪೆಕ್ ಎಂಡಿ.