ಜಿಲ್ಲೆ

ಅಡಕೆ ಕೊಯ್ಲು ಉಪಕರಣಗಳ ಸಹಾಯಧನ ಹೆಚ್ಚಳ

Karthika K.S

ಬೈಂದೂರು: ಅಡಕೆ ಬೆಳೆಗಾರರನ್ನು ಬೆಂಬಲಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಡಕೆ ಕೊಯ್ಲು ಉಪಕರಣಗಳ ಮೇಲಿನ ಸಹಾಯಧನವನ್ನು ಹೆಚ್ಚಿಸಿ, ಅತ್ಯಾಧುನಿಕ ಕೃಷಿ ಉಪಕರಣಗಳನ್ನು ಕೈಗೆಟಕುವಂತೆ ಮಾಡುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿರುವುದು ತೋಟಗಾರಿಕೆ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ತಿಂಗಳಲ್ಲಿ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘವು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಸರ್ಕಾರದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಅಡಕೆ ಕೊಯ್ಲು ಉಪಕರಣಗಳ ಮೇಲಿನ ಸಹಾಯಧನ ಹೆಚ್ಚಿಸುವಂತೆ ಮನವಿ ಮಾಡಲಾಗಿತ್ತು. ಅಲ್ಲದೇ ಪತ್ರ ಬರೆದು ಒತ್ತಾಯಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಉಪ ಅಭಿಯಾನದಡಿ ಟೆಲಿಸ್ಕೊಪಿಕ್ ಟ್ರಿ-ಪ್ರೂನರ್‌ಗೆ ಸಹಾಯಧನದ ಮೊತ್ತವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ಎಷ್ಟು ಹೆಚ್ಚಳ?

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ, ಅತೀ ಸಣ್ಣ ರೈತರು ಹಾಗೂ ಮಹಿಳೆಯರಿಗೆ ನೀಡಲಾಗುತ್ತಿದ್ದ ಶೇ.50ರ ಸಹಾಯಧನ ಗರಿಷ್ಠ ಮೊತ್ತ 5000 ರೂ.ಗಳಿಂದ 40,000ರೂ.ಗಳಿಗೆ ಹೆಚ್ಚಿಸಲಾಗಿದೆ. ಅಂತೆಯೇ ಸಾಮಾನ್ಯ ವರ್ಗದ ಕೃಷಿಕರಿಗೆ ನೀಡಲಾಗುತ್ತಿದ್ದ ಶೇ.40ರ ಸಹಾಯಧನದಂತೆ ಗರಿಷ್ಠ ಮೊತ್ತ 4000ರೂ. ಗಳಿಂದ 32,000 ರೂ. ಗಳಿಗೆ ಹೆಚ್ಚಿಸಿ ಪರಿಷ್ಕರಿಸಿದ ಆದೇಶ ಹೊರಡಿಸಿದೆ. ಇದರಿಂದಾಗಿ ಅಡಕೆ ಬೆಳೆಗಾರರಿಗೆ ನಿರೀಕ್ಷಿತ ಸಹಕಾರ ದೊರೆತಂತಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.