ಇಂಡಿ: ತಾಲೂಕಿನ ಭೀಮಾನದಿ ಪಾತ್ರದ ಗ್ರಾಮಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಭಾನುವಾರ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಹಲವಾರು ರೈತರು ಮಾತನಾಡಿ, ಮಹಾರಾಷ್ಟ್ರದಿಂದ ನೀರು ಹರಿಬಿಟ್ಟ ಕಾರಣ ನದಿ ಪಾತ್ರದ ಜಮೀನಿನಲ್ಲಿ ನುಗ್ಗಿ ಬೆಳೆ ಮುಳುಗಿ ಹಾನಿಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸ್ಥಳದಲ್ಲೇ ಇದ್ದ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಹಾಗೂ ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಅವರಿಗೆ ಈ ಕುರಿತು ಕೂಡಲೆ ತೋಟಗಾರಿಕೆ, ಕೃಷಿ ಇಲಾಖೆಯ ಸಹಯೋಗದಲ್ಲಿ ಸರ್ವೇ ನಡೆಸಿ ಯಾವ ರೈತರ ಎಷ್ಟು ಮೌಲ್ಯದ ಬೆಳೆ ಹಾನಿಯಾಗಿವೆ ಎಂಬುದರ ಕುರಿತು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.
ಪ್ರವಾಹ ಬಂದರೆ ಜನರಿಗೆ ತೊಂದರೆಯಾಗದಂತೆ ಏನು ಕ್ರಮ ಕೈಗೊಂಡಿದ್ದೀರಿ ? ಜನರಿಗೆ ಈ ಕುರಿತು ಎಚ್ಚರಿಕೆಯಿಂದ ಇರಲು ತಿಳಿಸಿದ್ದೀರಾ ? ಎಂದು ಶಾಸಕರು ಪ್ರಶ್ನಿಸಲಾಗಿ, ಉತ್ತರಿಸಿದ ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಿಗೆ ಎಚ್ಚರದಿಂದಿರಲು ಡಂಗೂರ ಸಾರಲಾಗಿದೆ.
ಮಲೆಕ್ಕಾಧಿಕಾರಿಗಳು, ಪಿಡಿಒಗಳು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳ ಗುಂಪು ಮಾಡಿ, ನೋಡಲ್ ಅಧಿಕಾರಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಹಾರಾಷ್ಟ್ರದ ಜಿಲ್ಲಾಧಿಕಾರಿಗಳೊಂದಿಗೆ ನಿತ್ಯ ಸಂಪರ್ಕದಲ್ಲಿದ್ದು, ಅವರು ಯಾವಾಗ, ಎಷ್ಟು ನೀರು ಬಿಡುತ್ತಾರೆ ಎಂಬ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಂಡು ನದಿ ಪಾತ್ರದ ಜನತೆಯ ಬಗ್ಗೆ ಕಾಳಜಿವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕಮಣೂರ, ಅಗರಖೇಡ, ಗುಬ್ಬೇವಾಡ, ಬರಗುಡಿ, ಹಿಂಗಣಿ ಗ್ರಾಮಗಳಿಗೆ ಶಾಸಕರು ಭೇಟಿ ನೀಡಿದರು.
ಡಿವೈಎಸ್ಪಿ ಜಗದೀಶ ಎಚ್., ಗ್ರಾಮೀಣ ಠಾಣಾ ಪಿಎಸ್ಐ ಸೋಮೇಶ ಗೆಜ್ಜಿ, ಮಹಾದೇವಪ್ಪ ಏವೂರ, ಎಚ್.ಎಸ್. ಪಾಟೀಲ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಸ್ಥಳಿಯರಾದ ವಿಠ್ಠಲಗೌಡ ಪಾಟೀಲ, ಹುಚ್ಚಪ್ಪ ತಳವಾರ, ಸಿದ್ಧಾರೂಢ ಮರಗೂರ ಮತ್ತಿತರರಿದ್ದರು.