ಜಿಲ್ಲೆ

ಗೈಡ್‌ಲೈನ್ ವ್ಯಾಲು ಇಳಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ಮಂಗಳೂರು: ಕಳೆದ ವರ್ಷದಲ್ಲಿ ಅಕ್ಟೋಬರ್‌ನಲ್ಲಿ ಜಾಗದ ಗೈಡ್‌ಲೈನ್ ವ್ಯಾಲುವನ್ನು ಹೆಚ್ಚಳ ಮಾಡಿದರ ಪರಿಣಾಮ ಮಂಗಳೂರು ಮಹಾನಗರ ಪಾಲಿಕೆಯ ಖಾಲಿ ಜಾಗಕ್ಕೆ ಹಾಕುವ ತೆರಿಗೆಯಲ್ಲಿ ಹೆಚ್ಚಳವಾಗಿರುವುದನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ಮನಪಾ ವ್ಯಾಪ್ತಿಯಲ್ಲಿ ಖಾಲಿ ಜಾಗಕ್ಕೆ 0.20 ಶೇ ಇದ್ದ ತೆರಿಗೆಯನ್ನು ಶೇ.0.50ಕ್ಕೆ ಏರಿಕೆ ಮಾಡಲಾಗಿದೆ. ಆದರೆ ನಾವು ಅದನ್ನು ಶೇ.0.10ಕ್ಕೆ ಇಳಿಸಲು ಶುಕ್ರವಾರ ಪ್ರತಿಪಕ್ಷದ ಸದಸ್ಯರ ಜತೆಗೆ ಸಭೆ ನಡೆಸಿ ನಿರ್ಧಾರಕ್ಕೆ ಬಂದಿದ್ದು, ಇದನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡುತ್ತೇವೆ. ಇದಕ್ಕೆ ಪ್ರತಿಪಕ್ಷದ ಸದಸ್ಯರು ಕೂಡ ನಮ್ಮ ಜತೆಗೆ ಬಂದು ನಗರಾಭಿವೃದ್ಧಿ ಸಚಿವ, ಇಲಾಖೆಯ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡುವ ಕೆಲಸಕ್ಕೆ ಮುಂದಾಗಬೇಕು ಎಂದರು.

*ಆಸ್ತಿ ತೆರಿಗೆ ಹೆಚ್ಚಳ

ಸ್ವಯಂಘೋಷಿತ ಆಸ್ತಿ ತೆರಿಗೆ ಬಂದ ಬಳಿಕ ಪ್ರತಿ ವರ್ಷನೂ ಶೇ.5ರಷ್ಟು ತೆರಿಗೆ ಹೆಚ್ಚಳ ಮಾಡುವುದು ಕಾನೂನಿನಲ್ಲಿಯೇ ಇದೆ. ನಮ್ಮ ಅವಧಿಯಲ್ಲೂ ಮೂರು ವರ್ಷದಲ್ಲಿ ಶೇ.15ರಷ್ಟು ಮಾಡಿದ್ದೇವೆ. ಈ ಹಿಂದೆ ಎರಡು ಬಾರಿ ಕಾಂಗ್ರೆಸ್ ಅಧಿಕಾರ ಇದ್ದಾಗ ಕೂಡ ಹೆಚ್ಚಳ ಮಾಡುವ ಕೆಲಸವಾಗಿದೆ ಮೇಯರ್ ತಿಳಿಸಿದರು.

*ಸರ್ಕಾರದಿಂದ ಅನುದಾನ ಇಲ್ಲ

ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ಒಂದೇ ಒಂದು ರೂಪಾಯಿ ಅನುದಾನ ಬಂದಿಲ್ಲ. ಸಚಿವ ಬೈರತಿ ಸುರೇಶ್ ಬಂದು 25 ಕೋಟಿ ರೂ. ಅನುದಾನ ಕೊಡುತ್ತೇವೆ. ಮತ್ತೊಂದು ಸಲ 75 ಕೋಟಿ ಅನುದಾನ ಕೊಡುತ್ತೇವೆ ಎನ್ನುತ್ತಾರೆ, ಇಲ್ಲಿಯವರೆಗೂ ಸರ್ಕಾರದಿಂದ ಒಂದೇ ಒಂದು ರೂಪಾಯಿ ಅನುದಾನ ಬಂದಿಲ್ಲ. ಆದರೆ ವರ್ಗಾವಣೆಯಂತೂ ಸಾಕಷ್ಟು ದಂಧೆ ರೂಪದಲ್ಲಿ ನಡೆದಿದೆ. 16 ತಿಂಗಳಲ್ಲಿ ಯಾವುದೇ ವಿಶೇಷ ಅನುದಾನ ಸರ್ಕಾರ ನೀಡಲಿಲ್ಲ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಮಾಡಿದ ಯೋಜನೆಗಳ ಕಾಮಗಾರಿಯನ್ನು ಈ ಸರ್ಕಾರ ನಿಲ್ಲಿಸಿಬಿಟ್ಟಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಆರೋಪಿಸಿದರು.

ಉಪ ಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ವರುಣ್ ಚೌಟ, ಲೋಹಿತ್, ಗಣೇಶ್ ಕುಮಾರ್ ಇದ್ದರು.