ವಿರಾಜಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪದವಿ ಪೂರ್ವ ಅನುದಾನಿತ ನೌಕರರ ಸಂಘದ ಕೊಡಗು ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರಿಗೆ ವಿಧಾನಸೌಧದಲ್ಲಿ ಮನವಿ ಸಲ್ಲಿಸಿದರು.
ಪದವಿ ಪೂರ್ವ ಅನುದಾನಿತ ಕಾಲೇಜುಗಳಲ್ಲಿ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆಯನ್ನು ಕನಿಷ್ಠ 40 ಕ್ಕೆ ನಿಗದಿಪಡಿಸಲಾಗಿದೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಕನಿಷ್ಠ ವಿದ್ಯಾರ್ಥಿಗಳ ಸಂಖ್ಯೆಯನ್ನು 40 ರಿಂದ 20ಕ್ಕೆ ಇಳಿಸಬೇಕು. ವಿದ್ಯಾರ್ಥಿಗಳ ಸಂಖ್ಯೆ ಆಧಾರದ ಮೇಲೆ ಉಪನ್ಯಾಸಕರ ವೇತನವನ್ನು ತಡೆಹಿಡಿಯಬಾರದು. ಪ್ರಜಾಪ್ರತಿನಿಧಿ ಕಾಯ್ದೆ ತಿದ್ದುಪಡಿ ಅನ್ವಯ ಮಲೆನಾಡು ಜಿಲ್ಲೆಗಳಿಗೆ ರಿಯಾಯಿತಿ ನೀಡಲಾಗಿದೆ. ಆದ್ದರಿಂದ ಕೊಡಗು ಸೇರಿದಂತೆ ಇತರ ಮಲೆನಾಡಿನ ಜಿಲ್ಲೆಗಳನ್ನು ವಿಶೇಷವಾಗಿ ಪರಿಗಣಿಸಬೇಕು. ಕಾರ್ಯಭಾರವಿಲ್ಲದ ಅನುದಾನಿತ ಕಾಲೇಜುಗಳ ಉಪನ್ಯಾಸಕರನ್ನು ಸಮೀಪದ ಸರ್ಕಾರಿ ಕಾಲೇಜಿಗೇ ನಿಯೋಜನೆ ಮಾಡಬೇಕೆಂಬ ಬೇಡಿಕೆಯುಳ್ಳ ಪತ್ರವನ್ನು ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎ.ಎಸ್.ಪೊನ್ನಣ್ಣ, ಶಿಕ್ಷಣ ಸಚಿವರು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಹೇಮಂತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಮಂದಪ್ಪ, ಖಜಾಂಚಿ ಡಾ. ಹೇಮಂತ್ ಕುಮಾರ್ ಹಾಗೂ ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷಚಂದ್ರಮೌಳಿ ಉಪಸ್ಥಿತರಿದ್ದರು.