ಶಿವಮೊಗ್ಗ: ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮೇ 15ರಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್ ಹೇಳಿದರು.
ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ನಾಯಕರು ಉಪಸ್ಥಿತರಿರುತ್ತಾರೆ. ಮತದಾನಕ್ಕೆ 20 ದಿನ ಇರುವುದರಿಂದ ಪ್ರಚಾರಕ್ಕೆ ವೇಗ ನೀಡಲಾಗುವುದು. ವಿಧಾನಸಭಾ ಕ್ಷೇತ್ರವಾರು ಪ್ರಚಾರ ಸಭೆಗಳನ್ನು ನಡೆಸಲಾಗುತ್ತದೆ. ನಮ್ಮ ಕಾರ್ಯಕರ್ತರು ವೈಯಕ್ತಿಕವಾಗಿ ಮತದಾರರನ್ನು ಭೇಟಿ ಮಾಡಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಭ್ಯರ್ಥಿ ಎಲ್ಲ ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಕಾರ್ಯಕರ್ತರ ಪಾತ್ರ ಮಹತ್ತರ. ಈ ಹಿಂದಿನ ಚುನಾವಣೆಗಳಂತೆ ಈ ಬಾರಿಯೂ ಪದವೀಧರ ಕ್ಷೇತ್ರ ಉಳಿಸಿಕೊಳ್ಳುತ್ತೇವೆ. ಮೈತ್ರಿ ಇರುವುದರಿಂದ ಜೆಡಿಎಸ್‌ನವರನ್ನೂ ಜತೆಯಲ್ಲೇ ಕರೆದೊಯ್ಯಬೇಕಿದೆ ಎಂದರು.
ನಮ್ಮಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ. ಪಕ್ಷ ಬೆಳೆದಿದ್ದು, ಸಹಜವಾಗಿಯೇ ಸಾಕಷ್ಟು ಮಂದಿ ಅಪೇಕ್ಷಿತರಿದ್ದಾರೆ. ಅನೇಕರು ಅವಕಾಶ ಕೋರುತ್ತಾರೆ. ಅವಕಾಶ ಸಿಗದೇ ಇದ್ದಾಗ ಸ್ವಲ್ಪ ಬೇಸರ ಉಂಟಾಗುವುದು ವಾಸ್ತವ. ಆದರೆ ಎಲ್ಲರೂ ಒಗ್ಗೂಡಿ ಚುನಾವಣೆಯಲ್ಲಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.