ಮಂಡ್ಯ: ಅನುದಾನಿತ ಶಾಲಾ ಮತ್ತು ಕಾಲೇಜುಗಳಲ್ಲಿ 2006 ನಂತರ ನೇಮಕಾತಿ ಹೊಂದಿ, ಆನಂತರ ವೇತನಾನುದಾನಕ್ಕೆ ಒಳಪಟ್ಟ ನೌಕರರಿಗೆ ಖಾಸಗಿ ಶೈಕ್ಷಣಿಕ ಸಂಸ್ಥೆ ಸಿಬ್ಬಂದಿಗಳ(ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ) ವಿಧೇಯಕ-2014ಕ್ಕೆ ತಿದ್ದುಪಡಿ ತರುವಂತೆ ಒತ್ತಾಯಿಸಿ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ಶನಿವಾರ ನಗರದಲ್ಲಿ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನೌಕರರು ಸಹಾಯಕ ಅಧಿಕಾರಿ ಡಾ.ರೋಹಿಣಿ ಅವರಿಗೆ ಮನವಿ ಸಲ್ಲಿಸಿದರು. 2006 ಏ.1ರ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರ ಪೂರ್ವದ ಸೇವೆಯನ್ನು ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಬೇಕು. ರಾಜ್ಯ ಸರ್ಕಾರ ನೀಡಿರುವ ಭರವಸೆಯಂತೆ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಸಹಕಾರ್ಯದರ್ಶಿ ಶಿವಣ್ಣ ಮಂಗಲ, ಶಿವಲಿಂಗೇಗೌಡ, ಡಿ.ಕೆ.ಜಗದೀಶ್, ಮಂಜುನಾಥ್, ಪುಟ್ಟಸ್ವಾಮಿ, ಶರತ್‌ಕುಮಾರ್, ಶಿವಕುಮಾರ್, ದೇವರಾಜ್, ಕಲ್ಲಪ್ಪ, ಕುಮಾರ್, ಕೆಂಪಲಿಂಗಯ್ಯ, ಶಿವರಾಜ್ ಇದ್ದರು.