ಹುಬ್ಬಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ ಖಾಜಿ ನೇತೃತ್ವದ ನಿಯೋಗ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಮುಕುಲ್ ಸರಣ ಮಾಥೂರ ಅವರಿಗೆ ಬುಧವಾರ ಮನವಿ ಸಲ್ಲಿಸಿತು.
ಕುಡಚಿ, ಬಾಗಲಕೋಟ ರೈಲು ಮಾರ್ಗದ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವುದು, ಲೋಕಾಪೂರ, ಧಾರವಾಡ ಹೊಸ ರೈಲು ಮಾರ್ಗ ಅನುಷ್ಠಾನಗೊಳಿಸುವುದು, ಲೋಕಾಪೂರವರೆಗೆ ಪ್ಯಾಸೆಂಜರ್ ರೈಲು ಸಂಚಾರ ಪ್ರಾರಂಭಿಸುವುದು, ಗದಗ, ಬಾಗಲಕೋಟ, ಸೊಲ್ಲಾಪುರ ಮಾರ್ಗದಲ್ಲಿ ಇನ್ನೂ ಹೆಚ್ಚಿನ ರೈಲುಗಳ ಸಂಚಾರ ಪ್ರಾರಂಭಿಸುವಂತೆ ಆಗ್ರಹಿಸಲಾಯಿತು.
ಕುತುಬುದ್ದೀನ ಖಾಜಿ ಮಾತನಾಡಿ, ದಶಕಗಳಿಂದ ಕುಂಟುತ್ತ ಸಾಗಿರುವ ಕುಡಚಿ ರೈಲು ಮಾರ್ಗ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, 2026ನೇ ಇಸ್ವಿಯೊಳಗೆ ಪೂರ್ಣಗೊಳಿಸುವಂತೆ ಆಗ್ರಹಿಸಿದರು.
ಲೋಕಾಪೂರದವರೆಗೆ ಪ್ಯಾಸೆಂಜರ ರೈಲು ಪ್ರಾರಂಭಿಸಬೇಕು. ಸವದತ್ತಿ ಯಲ್ಲಮ್ಮನ ಭಕ್ತರಿಗೆ ಅನುಕೂಲವಾಗುವಂತೆ ಲೋಕಾಪೂರ-ಸವದತ್ತಿ-ಧಾರವಾಡ ಈಗಾಗಲೇ ಸಮೀಕ್ಷೆ ಕಾರ್ಯ ಮುಗಿದಿದ್ದು, ಮುಂಬರುವ ಕೇಂದ್ರ ಮುಂಗಡ ಪತ್ರದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.
ಗದಗ-ಯಲವಿಗಿ ಹೊಸ ರೈಲು ಮಾರ್ಗ, ಆಲಮಟ್ಟಿ-ಯಾದಗಿರಿ ಹೊಸ ರೈಲು ಮಾರ್ಗಗಳನ್ನು ಕಾರ್ಯರೂಪಕ್ಕೆ ತರಬೇಕು. ಬಸವಾ ಎಕ್ಸಪ್ರೇಸ್ ರೈಲು ಸಂಚಾರವನ್ನು ಲೋಕಾಪೂರವರೆಗೆ ವಿಸ್ತರಿಸಬೇಕು. ಹುಬ್ಬಳ್ಳಿ -ನಿಜ್ಜಾಮುದ್ದೀನ, ಮೈಸೂರು-ಸಾಯಿನಗರ ಹಾಗೂ ಯಶವಂತಪೂರ-ಬಿಕಾನೇರ ರೈಲುಗಳು ನಿತ್ಯ ಸಂಚರಿಸಬೇಕು. ರಾಯಚೂರ-ವಿಜಯಪುರ ರೈಲು ಸಂಚಾರವನ್ನು ಗದಗವರೆಗೂ ವಿಸ್ತರಿಸಬೇಕು ಎಂದು ಕೋರಿದರು.
ಬೆಂಗಳೂರು-ಗಾಂಧಿಧಾಮ ರೈಲನ್ನು ಭೂಚ್ವರೆಗೆ ವಿಸ್ತರಿಸಬೇಕು. ಹೈದ್ರಾಬಾದ್-ವಿಜಯಪುರ ರೈಲನ್ನು ಗದಗದವರೆಗೆ ವಿಸ್ತರಿಸಬೇಕು. ಗದಗ-ಹುಟಗಿ ಡಬಲಿಂಗ್ ವಿದ್ಯುದ್ದೀಕರಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು.
ಪಂಡರಪುರ-ತಿರುಪತಿ ಹೊಸ ರೈಲು ಪ್ರಾರಂಭಿಸಿ ವಿಜಪುರ, ಬಾಗಲಕೋಟ, ಗದಗ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ನೈಋತ್ಯ ರೈಲ್ವೆ ಜಿಎಂ, ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಮಿತಿ ಜಿಲ್ಲಾ ಅಧ್ಯಕ್ಷ ಬಾಬಾಜಾನ ಮುಧೋಳ, ಮಂಜುಳಾ ಭೂಸಾರಿ, ಪ್ರೇಮಾ ರಾಠೋಡ, ಎಂ.ಕೆ. ಯಾದವಾಡ, ಜೆ.ಎಂ. ಜೈನೆಖಾನ, ರಾಜಕಿಶೋರ ನಿಡೋನಿ, ಬಸವರಾಜ ಕಪ್ಪಣ್ಣವರ, ಡಿ.ಎಫ್. ಹಾಜಿ, ದಾದಾಪೀರ ಕೆರೂರ, ಮೈನುದ್ದೀನ ಖಾಜಿ, ಮಮತಾಜ ಸುತಾರ ಹಾಗೂ ಇತರರು ಇದ್ದರು.