ಜಿಲ್ಲೆ

ಆರ್ಥಪೂರ್ಣ ಜೀವನಕ್ಕೆ ‘ಸುಭಾಷಿತಗಳು’ ಪ್ರೇರಕ

ಪಂಕಜ ಕೆ.ಎಂ.
  • ಆಂಧ್ರ ರಾಜ್ಯಪಾಲ ಅಬ್ದುಲ್ ನಜೀರ್
  • ಕೆ. ಜಿ. ರಾಘವನ್ ರಚಿಸಿದ ಕೃತಿ ಬಿಡುಗಡೆ

ಬೆಂಗಳೂರು: ಸುಭಾಷಿತಗಳು ಪ್ರಾಚೀನ ಭಾರತದಲ್ಲಿ ರಚನೆಯಾಗಿದ್ದರೂ, ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ ಎಲ್ಲ ಗಡಿಗಳನ್ನು ದಾಟಿ ವಿಶ್ವದಾದ್ಯಂತ ಪಸರಿಸಿದೆ ಹಾಗೂ ಪ್ರಸ್ತುತತೆ ಹೊಂದಿದೆ ಎಂದು ಆಂಧ್ರ ಪ್ರದೇಶದ ರಾಜ್ಯಪಾಲ ಹಾಗೂ ವಿಶ್ರಾಂತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಹೇಳಿದ್ದಾರೆ.


ನಗರದ ಭಾರತೀಯ ವಿದ್ಯಾ ಭವನದ ಕೆಆರ್‌ಜಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭವನದ ಮುಖ್ಯಸ್ಥ ಮತ್ತು ಹಿರಿಯ ವಕೀಲ ಕೆ.ಜಿ. ರಾಘವನ್ ರಚಿಸಿರುವ ‘ಸುಭಾಷಿತಗಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.


ಸಂಸ್ಕೃತದಲ್ಲಿ ವೈವಧ್ಯಮಯ ಸಾಹಿತ್ಯ ರಚನೆಯಾಗಿದೆ. ಅಂತಹ ಸಾಹಿತ್ಯ ಸಂಪತ್ತಿನಲ್ಲಿ ‘ಸುಭಾಷಿತ’ ಅತ್ಯಂತ ಮಹತ್ವದ ಸ್ಥಾನ ಪಡೆದಿವೆ. ಮಾನವ ಮೌಲ್ಯಗಳು, ಆಧ್ಯಾತ್ಮ, ಸಾಮಾಜಿಕ ವರ್ತನೆ, ಜೀವನಕ್ಕೆ ಅಗತ್ಯವಾದ ಮಾರ್ಗದರ್ಶನ ಹೀಗೆ ಹಲವಾರು ಅಂಶಗಳು ಸುಭಾಷಿತಗಳಲ್ಲಿವೆ. ಕಡಿಮೆ ಪದದಲ್ಲಿ ಆಳವಾದ ಅರ್ಥಗಳನ್ನು ಒಳಗೊಂಡಿರುವುದು ಸುಭಾಷಿತಗಳ ವಿಶೇಷತೆಯಾಗಿದೆ. ಇದು ವೈಯಕ್ತಿಕ ಬೆಳವಣಿಗೆ, ಆತ್ಮವಿಮರ್ಶೆ ಬಗೆಗಿನ ಆಳವಾದ ತಿಳಿವಳಿಕೆಯನ್ನು ನೀಡಲಿದೆ ಎಂದರು.


ಇಂದಿನ ದಿನಮಾನಕ್ಕೆ ಪ್ರಸ್ತುತವಾಗಿರುವ ‘ವಸುಧೈವ ಕುಟುಂಬಕಂ’ ಪರಿಕಲ್ಪನೆ ಜಾಗತಿಕ ಒಗ್ಗಟ್ಟು ಮತ್ತು ಜವಾಬ್ದಾರಿಯುತ ನಡೆಯ ಅಗತ್ಯವನ್ನು ಹೇಳುತ್ತದೆ ಎಂದ ಅವರು, ಕೆ.ಎಂ. ಮುನ್ಷಿ ಅವರಂತಹ ದಾರ್ಶನಿಕ ಕಟ್ಟಿ ಬೆಳೆಸಿದ ಭಾರತೀಯ ವಿದ್ಯಾಭವನವು ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ನಮ್ಮ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸಲು ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.


ಲೇಖಕ ಕೆ.ಜಿ. ರಾಘವನ್ ಮಾತನಾಡಿ, ವಿವೇಕವಿಲ್ಲದಿದ್ದರೆ ಜ್ಞಾನ ವ್ಯರ್ಥ. ಜ್ಞಾನವನ್ನು ಜನರ ಒಳಿತಿಗೆ, ಸಂಪತ್ತನ್ನು ಜನರ ಕಲ್ಯಾಣಕ್ಕೆ ಮತ್ತು ಶಕ್ತಿಯನ್ನು ದುರ್ಬಲರ ರಕ್ಷಣೆಗೆ ಬಳಸಬೇಕು ಎಂಬುದೇ ಈ ಸುಭಾಷಿತಗಳ ಆಶಯ. ಯುವಜನರು ದಿನಕ್ಕೊಂದು ಶ್ರೇಷ್ಠ ಚಿಂತನೆ ಎಂಬ ಪರಿಕಲ್ಪನೆಯಲ್ಲಿ ಈ ಕೃತಿಯನ್ನು ಓದುವ ಮೂಲಕ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದು ಎಂದರು.


ಐಎಎಸ್ ವಿಶ್ರಾಂತ ಅಧಿಕಾರಿ ಚಿರಂಜೀವಿ ಸಿಂಗ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಉಪಸ್ಥಿತರಿದ್ದರು.