ಡಿಪಿಎನ್ ಶ್ರೇಷ್ಠಿ
ಚಿತ್ರದುರ್ಗ: ಗಸ್ತು ಪೊಲೀಸರ ಕುಂಟು ನೆಪಕ್ಕೆ ತಂತ್ರಾಂಶ ನೆರವಿನೊಂದಿಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಅ ದಕ್ಕೆಂದೇ ರೂಪಿಸಿ, ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಈಗಾಗಲೇ ಜಾರಿಗೊಳಿಸಿರುವ ಇ-ಬೀಟ್ ಆಧುನಿಕ ಆನ್‌ಲೈನ್ ವ್ಯವಸ್ಥೆಯ ‘ಸುಬಾಹು ಗಾರ್ಡ್’ ಗುರುವಾರದಿಂದ ಅಧಿಕೃತವಾಗಿ ಚಾಲನೆಯಾಗಲಿದೆ.
2018ರ ಆರ್ಥಿಕ ಸಾಲಿನಲ್ಲಿ ರಾಜ್ಯದ ಬೀಟ್ ಪೊಲೀಸರಿಗೆ ಶಾಶ್ವತ ಉಚಿತ ಸಿಮ್ ಹಾಗೂ ಹೊಸ ಪದ್ಧತಿ ಮೂಲಕ ಪೊಲೀಸ್ ಬೀಟ್‌ಗೆ ಶಕ್ತಿ ತುಂಬಲು ಇಲಾಖೆ ಪ್ರಯತ್ನಿಸಿತ್ತು. ಇಷ್ಟಾದರೂ ಸಲ್ಲದ ಸಬೂಬು ಹೇಳಿ ಬೀಟ್ ತಪ್ಪಿಸುವ ಅಥವಾ ಪಾಯಿಂಟ್‌ಗೆ ಒಂದೇ ಬಾರಿ ಭೇಟಿ ನೀಡಿ, ಬೇರೆ, ಬೇರೆ ಸಮಯಗಳಲ್ಲಿ ಬಂದು ಹೋಗಿದ್ದೇವೆ ಎಂದು ಪುಸ್ತಕಕ್ಕೆ ಸಹಿ ಮಾಡುವ ಸಿಬ್ಬಂದಿ ನಡೆಗೆ ಕಡಿವಾಣ ಹಾಕಲು ಕಂಡುಕೊಂಡ ಉಪಾಯವೇ ‘ಇ-ಬೀಟ್ ಸುಬಾಹು ಗಾರ್ಡ್’.
ಏನಿದು ಸುಬಾಹು?
ಜಿಲ್ಲೆಯಲ್ಲಿರುವ 22 ಠಾಣೆಗಳ ವ್ಯಾಪ್ತಿಯ 950 ಹೆಚ್ಚು ಬೀಟ್‌ಗಳಲ್ಲಿ 1600 ಕ್ಕೂ ಹೆಚ್ಚು ಪಾಯಿಂಟ್ ಗುರುತಿಸಲಾಗಿದೆ. ಈ ಜಾಗದಲ್ಲಿನ್ನು ಪಾಯಿಂಟ್ ಪುಸ್ತಕದ ಬದಲು ಕ್ಯೂಆರ್ ಕೋಡ್ ಇರುತ್ತದೆ. ಅದನ್ನು ಗಸ್ತು ಸಿಬ್ಬಂದಿ ಸ್ಮಾರ್ಟ್ ಫೋನ್‌ನಲ್ಲಿ ಸ್ಕಾೃನ್ ಮಾಡಬೇಕು. ಆಗ ಆತನ ಪಾಯಿಂಟ್ ಭೇಟಿ ಖಚಿತವಾಗುತ್ತದೆ. ಅದೇ ಕ್ಷಣ ಮೇಲಧಿಕಾರಿ ಹಾಗೂ ಪಾಯಿಂಟ್‌ನ ಕಟ್ಟಡ ಮಾಲೀಕ ಅಥವಾ ಸಂಸ್ಥೆ ಮುಖ್ಯಸ್ಥರ ಮೊಬೈಲ್‌ಗೆ ಸಂದೇಶ ರವಾನೆ ಆಗುತ್ತದೆ.
ಚಾರ್ಜ್ ಇಲ್ಲವೆನ್ನುವಂತಿಲ್ಲ
ಫೋನ್ ಚಾರ್ಜ್ ಇರಲಿಲ್ಲ ಎಂಬ ಸಬೂಬಿಗೂ ಇದರಿಂದ ಕಡಿವಾಣ ಹಾಕಲಿದೆ. ಒಂದು ಕಡೆ ಸ್ಕಾೃನ್ ಮಾಡಿದಾಗ ಆತನ ಫೋನ್‌ನಲ್ಲಿ ಬ್ಯಾಟರಿ ಜಾರ್ಜ್ ಪ್ರಮಾಣ ಎಷ್ಟಿತ್ತೆಂಬುದು ಮೇಲಧಿಕಾರಿಗಳಿಗೆ ಗೊತ್ತಾಗುತ್ತದೆ. ಆದ್ದರಿಂದ ಸಿಬ್ಬಂದಿ ಈ ನೆಪ ಹೇಳಲು ಅವಕಾಶ ದೊರೆಯದು. ನಿಗದಿಯಾದ ಸ್ಥಳಕ್ಕೆ, ನಿಗದಿತ ಸಮಯಕ್ಕೆ ಭೇಟಿ ಕೊಡಲೇಬೇಕಿದೆ. ಇದರಿಂದ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಹಾಗೂ ಮೇಲಧಿಕಾರಿಗಳ ಪರಿಶೀಲನೆಯ ತಲೆನೋವನ್ನೂ ಕಡಿಮೆ ಮಾಡಲಿದೆ.
ನಗರ ಠಾಣೆ ವ್ಯಾಪ್ತಿಯ 22 ಬೀಟ್‌ಗಳಲ್ಲಿ 172 ಪಾಯಿಂಟ್‌ಗಳಿವೆ. ರಾತ್ರಿ ವೇಳೆ ಸಿಬ್ಬಂದಿ ಎಷ್ಟು ಡೆ ಹೋಗಿ ಬಂದಿದ್ದಾರೆಂಬುದರ ಪರಿಶೀಲನೆ ಸಾಧ್ಯವಾಗುತ್ತಿರಲಿಲ್ಲ. ನೂತನ ವ್ಯವಸ್ಥೆಯಿಂದ ಪರಿಶೀಲನೆ ಸುಲಭವಾಗಲಿದೆ ಎಂದು ನಗರ ಠಾಣೆ ಪಿಐ ಟಿ.ಆರ್.ನಯೀಂ ಅಹಮದ್ ಹೇಳಿದ್ದಾರೆ.
‘ಸುಬಾಹು ಗಾರ್ಡ್’ ಇ-ಬೀಟ್ ವ್ಯವಸ್ಥೆ ರಾಜ್ಯದ ಎಂಟತ್ತು ಜಿಲ್ಲೆಗಳಲ್ಲಿ ಇರಬಹುದು. ನಮ್ಮಲ್ಲೂ ಪ್ರಾಯೋಗಿಕವಾಗಿ ಹಲವು ದಿನಗಳಿಂದ ನಡೆಯುತ್ತಿದ್ದು, ಸಿಬ್ಬಂದಿಗೆ ತರಬೇತಿ ಕೊಡಲಾಗುತ್ತದೆ. ಗುರುವಾರ ಅಧಿಕೃತವಾಗಿ ಹೊಸ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತಿದೆ ಎಂದು ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ.