ಜಿಲ್ಲೆ

ಪಟಾಕಿ ಮಳಿಗೆ ಅನುಮತಿಗೆ ಕೊನೆ ದಿನ 30ಕ್ಕೆ

ಹೊನ್ನಾಳಿ: ದೀಪಾವಳಿ ಸಮೀಪಿಸುತ್ತಿದ್ದು, ಪಟಾಕಿ ಅಂಗಡಿ ತೆರೆಯಲು ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ಪಟಾಕಿ ಮಾರಾಟಗಾರರು ಅನುಮತಿಗಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದು, ಸೆ.30 ಕೊನೆ ದಿನ ಎಂದು ಉಪವಿಭಾಗಾಧಿಕಾರಿ ಸಂತೋಷ್​ಕುಮಾರ್ ಹೇಳಿದರು.

ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ತಾಲೂಕುಗಳ ಪಟಾಕಿ ಮಾರಾಟಗಾರರು ಮತ್ತು ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಳಕಿನ ಮತ್ತು ಪಟಾಕಿ ಹಬ್ಬ ದೀಪಾವಳಿಯನ್ನು ಎಲ್ಲರೂ ಸಡಗರದಿಂದ ಆಚರಿಸುವಂತಾಗಬೇಕೇ ಹೊರತು ಯಾವುದೇ ಅವಘಡಗಳಿಗೆ ಅವಕಾಶ ಮಾಡಿಕೊಡಬಾರದು. ಪಟಾಕಿಗಳ ನಿರ್ವಹಣೆ ಬಗ್ಗೆ ಸರ್ಕಾರ ರೂಪಿಸಿರುವ ನೀತಿ, ನಿಯಮಾವಳಿಗಳನ್ನು ಚಾಚೂ ತಪ್ಪದೇ ಪಾಲಿಸಿದಾಗ ಮಾತ್ರ ಅವಘಡಗಳು ಸಂಭವಿಸುವುದಿಲ್ಲ. ಇದನ್ನು ಪಟಾಕಿ ಮಾರಾಟಗಾರರು ಮನದಟ್ಟು ಮಾಡಿಕೊಳ್ಳಬೇಕು ಎಂದರು.

ಮಾರಾಟಗಾರರು ಗ್ರೀನ್ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಜತೆಗೆ ಪ್ರತಿ ಮಳಿಗೆಗಳ ಮಧ್ಯ ಸಾಕಷ್ಟು ಅಂತರವಿರಬೇಕು. ತಹಸೀಲ್ದಾರ್, ಅಗ್ನಿಶಾಮಕ ದಳ, ವಿದ್ಯುತ್ ಹಾಗೂ ಪೊಲೀಸ್ ಇಲಾಖೆಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಂಗಡಿ ಮಾಲೀಕರು ಮರಳು ಮತ್ತು ಕನಿಷ್ಠ 200 ಲೀಟರ್​ನ ಎರಡು ಡ್ರಮ್ಳಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಅಂಗಡಿಗಳ ಸಮೀಪ ಧೂಮಪಾನ ನಿಷೇಧಿಸಲಾಗಿರುತ್ತದೆ. ಅಂಗಡಿಗಳಿಗೆ ಅನುಮತಿ ನೀಡುವ ಪೂರ್ವದಲ್ಲಿ ಇಲಾಖೆಗಳ ಅಧಿಕಾರಿಗಳ ತಂಡದಿಂದ ಸ್ಥಳ ಪರಿಶೀಲನೆ ಕೂಡ ಮಾಡಲಾಗುತ್ತದೆ ಎಂದು ಹೇಳಿದರು.

ಚನ್ನಗಿರಿ, ನ್ಯಾಮತಿ ಹಾಗೂ ಹೊನ್ನಾಳಿ ಪಟಾಕಿ ಮಾರಾಟಗಾರರು ಕೆಲವು ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದಾಗ ಕಾನೂನು ಚೌಕಟ್ಟಿನ ಒಳಗೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದರು.

ಈಗಾಗಲೇ ಹೊನ್ನಾಳಿ 6, ನ್ಯಾಮತಿ 6 ಹಾಗೂ ಚನ್ನಗಿರಿ 14 ಪಟಾಕಿ ಅಂಗಡಿಗಳ ಅನುಮತಿಗಾಗಿ ಅರ್ಜಿಗಳು ಬಂದಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು. .

ಹೊನ್ನಾಳಿ ತಹಸೀಲ್ದಾರ್ ಸಿ. ರಾಜೇಶ್​ಕುಮಾರ್, ನ್ಯಾಮತಿ ತಹಸೀಲ್ದಾರ್ ಕವಿರಾಜ್, ಗ್ರೇಡ್ -2 ತಹಸೀಲ್ದಾರ್ ಗೋವಿಂದಪ್ಪ, ಹೊನ್ನಾಳಿ ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ನ್ಯಾಮತಿಯ ರಾಘವೇಂದ್ರ, ಹೊನ್ನಾಳಿ ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ, ನ್ಯಾಮತಿ ಪಪಂ ಮುಖ್ಯಾಧಿಕಾರಿ ಗಣೇಶ್​ರಾವ್, ಹೊನ್ನಾಳಿ ಪಿಎಸ್​ಐ ಕುಮಾರ್, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ಮೂರು ತಾಲೂಕುಗಳ ಪಟಾಕಿ ವರ್ತಕರಿದ್ದರು.