ಜಿಲ್ಲೆ

ವಿದ್ಯುತ್ ಪೂರೈಕೆಯಲ್ಲಿ ತೊಂದರೆ : ಕಡಬ ಮೆಸ್ಕಾಂ ಉಪವಿಭಾಗಮಟ್ಟದ ಜನಸಂಪರ್ಕ ಸಭೆಯಲ್ಲಿ ಆರೋಪ : ಕೊಂಬೆಗಳನ್ನು ಕತ್ತರಿಸಲು ಆಗ್ರಹ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಡಬ

ಮಳೆಗಾಲದ ಆರಂಭದಲ್ಲಿಯೇ ವಿದ್ಯುತ್ ಪೂರೈಕೆಯಲ್ಲಿ ತೀವ್ರ ತೊಂದರೆಯಾಗುತ್ತಿದೆ. ಮಳೆಗಾಲ ಆರಂಭವಾಗುವ ಮೊದಲೇ ವಿದ್ಯುತ್ ಮಾರ್ಗದಲ್ಲಿ ಸಮಸ್ಯೆಗೆ ಕಾರಣವಾಗಿರುವ ಮರದ ಕೊಂಬೆಗಳನ್ನು ತೆರವು ಮಾಡುವ ಕಾರ್ಯ ನಡೆದಿದ್ದರೆ ಪದೇಪದೆ ವಿದ್ಯುತ್ ವ್ಯತ್ಯಯ ಆಗುವುದನ್ನು ತಡೆಯಲು ಸಾಧ್ಯ. ಆದುದರಿಂದ ಕೂಡಲೇ ವಿದ್ಯುತ್ ಮಾರ್ಗಕ್ಕೆ ತಾಗುವ ಮರದ ಕೊಂಬೆಗಳನ್ನು ಕತ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ವಿದ್ಯುತ್ ಗ್ರಾಹಕರು ಆಗ್ರಹಿಸಿದರು.

ಕಡಬ ಮೆಸ್ಕಾಂ ಉಪವಿಭಾಗ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿದರು.

ಗ್ರಾಹಕರ ಪ್ರಶ್ನೆಗಳಿಗೆ ಸ್ಪಂದಿಸಿದ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅವರು ಮಳೆಗಾಲದಲ್ಲಿ ಗಾಳಿ ಮಳೆಗೆ ಕೆಲವು ಕಡೆ ವಿದ್ಯುತ್ ಲೈನಿನ ಮೇಲೆ ಮರದ ಗೆಲ್ಲುಗಳು ಬಿದ್ದು ಆಗಾಗ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆ ಬಗ್ಗೆ ಆಯಾಯ ವಿಭಾಗದಲ್ಲಿ ಮೆಸ್ಕಾಂ ಇಂಜಿನಿಯರ್‌ಗಳು ಖುದ್ದಾಗಿ ನಿಂತು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸೂಚಿಸಿದರು.

ಮೆಸ್ಕಾಂ ಪ್ರಭಾರ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ., ಕಡಬ ಮೆಸ್ಕಾಂ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿ ಕುಮಾರ್, ಕಡಬ ಶಾಖಾಧಿಕಾರಿ ಸತ್ಯನಾರಾಯಣ, ನೆಲ್ಯಾಡಿ ಶಾಖಾಧಿಕಾರಿ ಮನೋಜ್ ಕುಮಾರ್, ಆಲಂಕಾರು ಶಾಖಾಧಿಕಾರಿ ಪ್ರೇಮ್‌ಕುಮಾರ್, ಬಿಳಿನೆಲೆ ಶಾಖಾಧಿಕಾರಿ ಪ್ರಶಾಂತ್, ಕಡಬ ಸರ್ವಿಸ್ ಸ್ಟೇಷನ್ ಅಧಿಕಾರಿ ವಸಂತಕುಮಾರ್, ತಾಂತ್ರಿಕ ಸಹಾಯಕ ಇಂಜಿನಿಯರ್ ಅನ್ನಮ್ಮ, ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಿ

ಮರ್ದಾಳದಿಂದ ಸುಬ್ರಹ್ಮಣ್ಯದ ತನಕ ರಸ್ತೆಯ ಪಕ್ಕದ ಮರಗಳು ಆಗಾಗ ವಿದ್ಯುತ್ ಮಾರ್ಗದ ಮೇಲೆ ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಮೆಸ್ಕಾಂಗೆ ಅಪಾರ ನಷ್ಟ ಉಂಟುಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಮರ್ದಾಳದಿಂದ ಸುಬ್ರಹ್ಮಣ್ಯದವರೆಗೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಬೇಕು. ಹಾಗೆಯೇ ಕಡಬ ಕಾಲೇಜು ರಸ್ತೆಯಲ್ಲಿ ವಿದ್ಯುತ್ ಮಾರ್ಗದ ಹಳೆಯ ತಂತಿಗಳನ್ನು ಬದಲಾಯಿಸಬೇಕು ಎಂದು ಜಿಲ್ಲಾಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಅಹವಾಲು ಸಲ್ಲಿಸಿದರು.

ಕಡಬ ಸಿಟಿ ಫೀಡರ್ ವಿಸ್ತರಣೆಗೆ ಬೇಡಿಕೆ

ಕಡಬ ಸಿಟಿ ಫೀಡರನ್ನು ದಾಮ್ರೋಡಿ, ಮುಳಿಮಜಲು, ಕೋಡಿಬೈಲು ವರೆಗೆ ವಿಸ್ತರಿಸಬೇಕೆಂದು ಸತೀಶ್ ನಾಕ್ ಮೇಲಿನಮನೆ ಆಗ್ರಹಿಸಿದರು. ಕಾಂಗ್ರೆಸ್ ಮುಖಂಡ ಅಭಿಲಾಷ್ ಮಾತನಾಡಿ, ಮುಖ್ಯ ಮಾರ್ಗದ ವಿದ್ಯುತ್ ಸರಬರಾಜಿನಲ್ಲಿ ಆಗಾಗ ಸಮಸ್ಯೆ ಉಂಟಾಗುತ್ತಿದೆ. ಸುಳ್ಯ, ಪುತ್ತೂರು, ಕಡಬಕ್ಕೆ ವಿದ್ಯುತ್ ಮಾರ್ಗದಲ್ಲಿನ ದುರಸ್ತಿ ಕೆಲಸ ಮಾಡಲು ಕೇವಲ ಒಂದು ತಂಡ ಮಾತ್ರ ಇದೆ ಎಂದು ಮಾಹಿತಿ ಇದೆ. ಅದರಿಂದಾಗಿ ದುರಸ್ತಿ ಕೆಲಸಗಳು ತಡವಾಗುತ್ತದೆ. ಕೆಟ್ಟು ಹೋದಲ್ಲಿಗೆ ವಿದ್ಯುತ್ ಪರಿವರ್ತಕಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಿದರೆ ಕೆಲವು ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದರು.

ರಸ್ತೆಯಂಚಿನಲ್ಲೇ ವಿದ್ಯುತ್ ಕಂಬ!

ಮೆಸ್ಕಾಂ ವತಿಯಿಂದ ಲೋಕೋಪಯೋಗಿ ರಸ್ತೆ ಬದಿಯಲ್ಲಿಯೇ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಆಕಸ್ಮಾತ್ ವಾಹನಗಳು ವಿದ್ಯುತ್ ಕಂಬಗಳಿಗೆ ಡಿಕ್ಕಿಯಾದರೆ, ಅಪಘಾತ ಆದ ವಾಹನದವರಿಂದಲೇ ಕಂಬ ಹಾಕಲು ಶುಲ್ಕ ಕಟ್ಟಿಸಿಕೊಳ್ಳಲಾಗುತ್ತಿದೆ. ಅದನ್ನು ಕೂಡಲೇ ನಿಲ್ಲಿಸಬೇಕು. ಮೆಸ್ಕಾಂ ಮೊದಲು ರಸ್ತೆ ಅಂಚಿನಿಂದ ಸ್ವಲ್ಪ ದೂರದಲ್ಲಿ ಕಂಬ ಹಾಕಬೇಕು. ಈ ವಿಚಾರವನ್ನು ಜಿಲ್ಲಾಮಟ್ಟದ ಸಭೆಯಲ್ಲಿಯೂ ಪ್ರಸ್ತಾಪ ಮಾಡಿದ್ದೇನೆ ಎಂದು ಕಡಬ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.

\https://www.vijayavani.net/dr-kiran-kumar