ಜಿಲ್ಲೆ

ಉದ್ಯೋಗ ಸೃಷ್ಟಿಸಿಕೊಂಡ ವರ್ಗದಿಂದ ಮೌಢ್ಯ ಜೀವಂತ

Chitradurga

ಚಿತ್ರದುರ್ಗ: ಮೌಢ್ಯವನ್ನೇ ಉದ್ಯೋಗವಾಗಿ ಸೃಷ್ಟಿಸಿಕೊಂಡು ಆರ್ಥಿಕ ಬೆಳವಣಿಗೆ ಸಾಧಿಸುವುದರ ಜತೆ ಬದುಕು ಕಟ್ಟಿಕೊಳ್ಳುತ್ತಿರುವ ಬಹುದೊಡ್ಡ ವರ್ಗವಿದ್ದು, ಇದರಿಂದಾಗಿ ಆಧುನಿಕ, ತಂತ್ರಜ್ಞಾನದ ಯುಗದಲ್ಲೂ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಚಿಂತಕ ಪ್ರೊ.ಜಿ.ಎನ್.ಮಲ್ಲಿಕಾರ್ಜುನಪ್ಪ ಬೇಸರ ವ್ಯಕ್ತಪಡಿಸಿದರು.

ವಿಜ್ಞಾನ ಪರಿಷತ್ತು ರಾಜ್ಯ ಮತ್ತು ಜಿಲ್ಲಾ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಪ್ರೋತ್ಸಾಹಕ ಸೊಸೈಟಿಯಿಂದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜನವಿಜ್ಞಾನ ಚಳವಳಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಮೇಲೆ ಪ್ರಭಾವ ಬೀರುವ ಶಕ್ತಿಗಳಾದ ಶ್ರೀಮಂತರು, ಬಂಡವಾಳ ಮತ್ತು ಪುರೋಹಿತ ಶಾಹಿ ಈ ಅಸಮಾನ್ಯ ವರ್ಗ ಸಮಾಜವನ್ನು ಮೌಢ್ಯಕ್ಕೆ ತಳ್ಳಿದೆ. ಹೀಗಾಗಿ ಸಾರ್ವಜನಿಕರನ್ನು ದೂರುವುದರಲ್ಲಿ ಅರ್ಥವಿಲ್ಲ ಎಂದರು.

ಸಾವಿಗಿಂತಲೂ ಅದರ ಬಗೆಗಿನ ಆತಂಕ ಅತ್ಯಂತ ಭಯಂಕರವಾದುದು. ಆದ್ದರಿಂದ ಮೂಢನಂಬಿಕೆಗಳಿಗೆ ಮೂಲ ಕಾರಣವೇ ಭಯ. ಅನುಕರಣೆ ಮಾಡುವವರನ್ನು ಇದರಿಂದ ಹೊರಗೆ ತರುವುದು ಸುಲಭದ ಕೆಲಸವಲ್ಲ. ಎಷ್ಟೋ ಬಾರಿ ಒಡನಾಡಿಗಳು, ಬಂಧು-ಮಿತ್ರರ ಸಂಬಂಧ ಕಳೆದುಕೊಳ್ಳುವ ಭೀತಿ ಎದುರಾಗಿ ಅದರೊಟ್ಟಿಗೆ ಸಾಗುವ ಸಂದರ್ಭಗಳು ಮೌಢ್ಯ ವಿರೋಧಿಗಳ ಜೀವನದಲ್ಲೂ ಸಂಭವಿಸಿವೆ ಎಂದು ಐತಿಹಾಸಿಕ ಘಟನೆಗಳ ಸಮೀತ ವಿವರಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿ ಹಲವು ಬಗೆಯ ಸಂಶೋಧನೆಗಳಿಗೆ ಹಣ ಸುರಿಯುವ ಬಹುತೇಕರು ಬಂಡವಾಳಶಾಹಿಗಳೇ ಆಗಿದ್ದಾರೆ. ಹೀಗಾಗಿ ಅಧಿಕ ಲಾಭದ ನಿರೀಕ್ಷೆ ಹೊಂದಿರುತ್ತಾರೆ. ಜನರಲ್ಲಿ ಮೌಢ್ಯ ಬಿತ್ತುವ ಕೆನೆ ಪದರಕ್ಕೆ ಇವರೂ ವಾರಸುದಾರರಾಗಿದ್ದಾರೆ. ಇದು ವಾಸ್ತವ ಮತ್ತು ನಂಬಿಕೆ ನಡುವೆ ಸಂಘರ್ಷಕ್ಕೂ ಎಡೆಮಾಡಿಕೊಟ್ಟಿದೆ ಎಂದು ದೂರಿದರು.

ವಿದ್ಯಾರ್ಥಿಗಳ ಅಗತ್ಯತೆ ಶಿಕ್ಷಕರು ಅರಿತಾಗ ಯಾವ ಧರ್ಮ, ದೇವರ ಅಗತ್ಯವೂ ಬಾರದು. ಮನುಷ್ಯರ ಉನ್ನತಿಗೆ ಬೇಕಿರುವುದು ಸರಳತೆ, ವಿನಯತೆ ಮತ್ತು ಕಾಯಕ. ಆದ್ದರಿಂದ ಯಾವುದೇ ಬದಲಾವಣೆಯಾಗಲಿ ಸಾಮೂಹಿಕ ಮತ್ತು ಸಂಘಟನಾತ್ಮಕವಾಗಿಯೇ ಜನ್ಮತಾಳಬೇಕು. ಶಿಕ್ಷಕರು ಸ್ವಯಂಪ್ರೇರಣೆಯಿಂದ ಸರ್ವಕಾಲಿಕ ಸತ್ಯವಾದ ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿ ಜಾಗೃತಿ ಮೂಡಿಸಬೇಕು. ಆಗ ಮಾತ್ರ ಮೌಢ್ಯಕ್ಕೆ ಜಾಗ ಸಿಗದು ಎಂದು ಸಲಹೆ ನೀಡಿದರು.

ಕರಾವಿಪ ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಸಹ ಕಾರ್ಯದರ್ಶಿ ಶ್ರೀನಾಥ್‌, ಡಾ.ರಹಮತ್‌ವುಲ್ಲಾ, ಸಂಯೋಜಕ ಎಚ್‌.ಎಸ್‌.ಟಿ.ಸ್ವಾಮಿ ಇತರರಿದ್ದರು.