ಕೂಡಲಸಂಗಮ: ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡುವುದಕ್ಕಿಂತ ಇಷ್ಟಪಟ್ಟು ಅಧ್ಯಯನ ಮಾಡಬೇಕೆಂದು ಕೂಡಲಸಂಗಮ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಚಾರ್ಯ ಸುರೇಶ ರಾಠೋಡ ಹೇಳಿದರು.
ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಅತ್ಯುತ್ತಮ ತರಬೇತುದಾರರನ್ನಾಗಿ ತಯಾರಿಸಿ ವಿವಿಧ ಕಂಪನಿಗಳಿಗೆ ಕಳುಹಿಸುತ್ತೇವೆ. ಪ್ರತಿ ವರ್ಷ ನಮ್ಮ ತರಬೇತಿ ಕೇಂದ್ರದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ವಿವಿಧ ಕಂಪನಿಗಳು ನಡೆಸಿದ ಸಂದರ್ಶನದಲ್ಲಿ ಆಯ್ಕೆಯಾಗುವರು. ಈ ವರ್ಷದ ಸಂದರ್ಶನದಲ್ಲಿ 43 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಘಟಕದ ಮುಖ್ಯಸ್ಥ ಯಲ್ಲಪ್ಪ ಸವದತ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಕಂಪನಿಗಳಲ್ಲಿ ಜಿಟಿಟಿಸಿ ಮುಗಿಸಿದ ತರಬೇತಿದಾರರಿಗೆ ಅಧಿಕ ಅವಕಾಶವಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತರಬೇತಿ ಅವಧಿ ಮುಖ್ಯಸ್ಥ ಶಿವಕುಮಾರ ಎ.ಕೆ. ಮಾತನಾಡಿ, ನಮ್ಮ ತರಬೇತಿ ಕೇಂದ್ರದಲ್ಲಿ 3 ವರ್ಷ ತರಬೇತಿ ಪಡೆದ ವಿದ್ಯಾರ್ಥಿಗಳು ನಾಲ್ಕನೇ ವರ್ಷ ಔದ್ಯೋಗಿಕ ತರಬೇತಿಯನ್ನು ಒಂದು ವರ್ಷ ಆಯ್ಕೆಯಾದ ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವರು. ಈ ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳು ಹೇಗೆ ಕಾರ್ಯನಿರ್ವಹಿಸಬೇಕೆಂದು ವಿವರಿಸಿದರು.
ವಿವಿಧ ಕಂಪನಿಗಳಿಗೆ ಒಂದು ವರ್ಷದ ತರಬೇತಿಗೆ ಆಯ್ಕೆಯಾದ 43 ವಿದ್ಯಾರ್ಥಿಗಳಿಗೆ ಆದೇಶ ಪ್ರತಿ ನೀಡಲಾಯಿತು. ಸಮಾರಂಭದಲ್ಲಿ ಉಪನ್ಯಾಸಕ ವೀರಣ್ಣ ಮನಗೊಂಡ, ಪಾಲಕರು ಇದ್ದರು.