ಮೈಸೂರು: ಚಾಮುಂಡಿಬೆಟ್ಟದ ದೇವಾಲಯಗಳ ಕುರಿತು ಮಾಹಿತಿ ಇಟ್ಟಿರುವ ಇತಿಹಾಸಕಾರರು, ಮಹಿಷ ಪ್ರತಿಮೆ ಯಾವಾಗ ನಿರ್ಮಾಣವಾಯಿತು ಎಂದು ಹೇಳುವುದಿಲ್ಲ ಎಂದು ಮೈಸೂರು ವಿಶ್ವ ವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ಹೇಳಿದರು.
ಮಹಿಷ ದಸರಾ ಆಚರಣೆ ಸಮಿತಿಯಿಂದ ನಗರದ ಬುದ್ಧ ವಿಹಾರ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಮಹಿಷ ಮಂಡಲೋತ್ಸವ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಚಾಮುಂಡಿಬೆಟ್ಟದಲ್ಲಿರುವ ದೇವಾಲಯ, ನಂದಿ, ಮೆಟ್ಟಿಲುಗಳನ್ನು ಯಾರು ನಿರ್ಮಿಸಿದರು ಎಂಬುದರ ಬಗ್ಗೆ ಪೂರ್ಣ ಮಾಹಿತಿ ಇದೆ. ಆದರೆ ಮಹಿಷ ಪ್ರತಿಮೆ ಯಾರು ನಿರ್ಮಾಣ ಮಾಡಿದರು? ಎಷ್ಟು ವೆಚ್ಚವಾಗಿದೆ? ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇವುಗಳ ಮಾಹಿತಿ ಇರಬೇಕಾದರೆ, ಮಹಿಷ ಪ್ರತಿಮೆ ಬಗ್ಗೆಯೂ ಇರುತ್ತದೆ. ಆದರೆ ಬೇಕೆಂದು ಮುಚ್ಚಿಟ್ಟಿದ್ದಾರೆ ಎಂದು ದೂರಿದರು.
ಚಾಮುಂಡಿಬೆಟ್ಟದ ಮೇಲೆ 400 ವರ್ಷಗಳ ಹಿಂದೆ ಮಹಿಷನ ಪ್ರತಿಮೆ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಧ್ಯಯನ ಮಾಡುವವರು ಇದರ ಬಗ್ಗೆ ಅಧ್ಯಯನ ಮಾಡಬೇಕು ಎಂದರು.
ಮಹಾ ಭಾರತದಲ್ಲಿಯೂ ಮಹಿಷೂರಿನ ಬಗ್ಗೆ ಉಲ್ಲೇಖವಿದೆ. ಅಶೋಕ ಚಕ್ರವರ್ತಿಯ ಮೂರನೇ ಶತಮಾನದಲ್ಲಿ ಬೌದ್ಧ ಬಿಕ್ಕುಗಳನ್ನು ಧರ್ಮ ಪ್ರಚಾರಕ್ಕೆ ಕಳುಹಿಸಿಕೊಟ್ಟಿದ್ದರು. ಅವರೇ ಮಹಿಷ ಎಂಬ ಮಾತಿದೆ ಎಂದು ಹೇಳಿದರು.
ಇತಿಹಾಸ ಬರೆಯುವವರು ಪೂರ್ವಗ್ರಹ ಪೀಡಿತರಾಗಿದರೆ, ತಾವು ಕಂಡಿದ್ದ ಸುಳ್ಳನ್ನು ಇತಿಹಾಸ ಎಂದು ನಂಬಿಸುತ್ತಾರೆ. ಇದೇ ರೀತಿ ಕಾಲಗರ್ಭದಲ್ಲಿ ಸಾಕಷ್ಟು ವಿಷಯಗಳು ಇರುತ್ತದೆ. ಮಹಿಷ ಮಂಡಲ ಅಂದರೆ ಕೇವಲ ಮೈಸೂರು ನಗರವಲ್ಲ. ದಕ್ಷಿಣದ ಭಾಗವಲ್ಲ. ಇದರ ಬಗ್ಗೆ ಇತಿಹಾಸ, ಆಧುನಿಕ ಇತಿಹಾಸ, ಪುರಾಣ, ಪ್ರಾಚೀನ ಇತಿಹಾಸ ಓದಿ ತಿಳಿದುಕೊಳ್ಳಬೇಕು. ಆದರೆ ಕೆಲವರು ಇತಿಹಾಸ ಪುರಾಣಕ್ಕೂ ಸಂಬಂಧ ಕಲ್ಪಿಸಿ ಚರ್ಚಿಸುತ್ತಾರೆ ಎಂದು ಬೇಸರ ವ್ಯಕ್ತಪಡಿದರು.
ಮಹಿಷ ಮಂಡಲದ ಉತ್ಸವ ಎಂದರೆ, ಹಬ್ಬ ಎಂದು ಬರುತ್ತದೆ. ಅದು ದಸರಾವೇ ಅಗಿದೆ. ಆದರೆ ದಸರಾ ನಾಡಿನ ಪ್ರತಿಷ್ಠೆಯ ಸಂಭ್ರಮದ ಹಬ್ಬವಾಗಿದೆ. ಮೈಸೂರಿಗೂ ಈ ಹಬ್ಬಕ್ಕೂ ಏನು ಸಂಬಂಧ. ಇದರ ಬಗ್ಗೆ ಇರುವ ಕಲ್ಪನೆಯನ್ನು ಮುಕ್ತ ಮನಸ್ಸಿನಿಂದ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಉರಿಲಿಂಗ ಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಚಾರಿತ್ರಿಕ ಹಿನ್ನೆಲೆಯ ಮಹಿಷಾಸುರನ ಮುಚ್ಚಿಟ್ಟು ದಸರಾ ಮಾಡುವುದು ಎಷ್ಟು ಸರಿ? ಈ ಮುಚ್ಚಿಟ್ಟ ಇತಿಹಾಸವನ್ನು ಹೊರತರಬೇಕು. ಮನುವಾದಿಗಳ ಹಬ್ಬವನ್ನು ಮಾಡುತ್ತಾ ಅಂಬೇಡ್ಕರ್‌ವಾದಿಯಾಗಲೂ ಸಾಧ್ಯವಿಲ್ಲ. ಇಂದು ದೇಶದ ಒಡಿಸ್ಸಾ, ಬಿಹಾರ, ರಾಜಸ್ಥಾನಗಳಲ್ಲೂ ಈ ಆಚರಣೆ ನಡೆಯುತ್ತಿದೆ. ವಿಶ್ವವಿದ್ಯಾಲಯದಲ್ಲಿ ಮಹಿಷಾ ಪಡೆ ರಚನೆಗೆ ಯುವಜನರೂ ಮುಂದಾಗುತ್ತಿದ್ದಾರೆ ಎಂದರು.
ಇತಿಹಾಸವನ್ನು ಮರೆತ ಸಮುದಾಯವು ತನ್ನ ಸಮಾಧಿಯನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ನಾಗಪುರದ ಕಾರ್ಯಾಲಯವು ನಮ್ಮನ್ನು ಸಂಪೂರ್ಣ ನಾಶ ಮಾಡುತ್ತದೆ. ಎಂದು ಟೀಕಿಸಿದರು.
ಧರ್ಮಸ್ಥಳ ನಮ್ಮದು, ಬಾಲಾಜಿ ನಮ್ಮವ, ಅಯ್ಯಪ್ಪ ನಮ್ಮವ ಎಂದು ಹೇಳುತ್ತಾರೆ, ಅದು ಸತ್ಯ ಕೂಡ. ಈ ದೇಶದಲ್ಲಿ ಎಲ್ಲಿ ಭೂಮಿ ಅಗೆದರೂ ಸಿಗುವುದು ಬುದ್ಧನೇ, ಧಮ್ಮಚಕ್ರವೇ. ಆದರೆ ಇಂದು ನಮ್ಮ ಆರಾಧನಾ ಸ್ಥಳಗಳು ನಮ್ಮವಾಗಿ ಉಳಿದಿಲ್ಲ. ಗಣೇಶನ ಮೂರ್ತಿ ಕೂರಿಸಿ ಪೂಜೆ ಮಾಡುತ್ತಿರುವ ನಮ್ಮವರು ಅಂಬೇಡ್ಕರ್ ಅವರು ಕೈಗಿತ್ತ ಪೆನ್ ಅನ್ನು ಮರೆತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಸಾಂಸ್ಕೃತಿಕ ನಗರಿಯಲ್ಲಿ ಸಂಘರ್ಷ ಬೇಡ ಎನ್ನುವ ಉದ್ದೇಶದಿಂದ ಮಹಿಷಾ ದಸರಾ ಎನ್ನುವ ಬದಲು ಮಹಿಷ ಮಂಡಲೋತ್ಸವ ಎಂದು ಉತ್ಸವ ಮಾಡಲಾಗುತ್ತಿದೆ. ಸೆ.29ರಂದು ಪುರಭವನದಲ್ಲಿ ಆಯೋಜಿಸಿರುವ ಈ ಉತ್ಸವಕ್ಕೆ ಹೆಚ್ಚಿನ ಜನರು ಆಗಮಿಸುವಂತೆ ಕೋರಿದರು.
ಇತಿಹಾಸಕಾರ ಪ್ರೊ.ನಂಜರಾಜೇ ಅರಸ್, ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಆಧ್ಯಾಪಕ ಸಿ.ಜಿ.ಲಕ್ಷ್ಮೀಪತಿ, ಮಹಿಳಾ ಹೋರಾಟಗಾರ್ತಿ ಜಯಲಕ್ಷ್ಮೀ, ಯುವ ಚಿಂತಕರಾದ ದಿಲೀಪ್ ನರಸಯ್ಯ, ನವಯಾನ ಬುದ್ಧ ಧಮ್ಮದ ಒಕ್ಕೂಟದ ಸಂಚಾಲಕ ಬಿ.ಎಂ.ನಿಂಗರಾಜು, ಸಾಹಿತಿಗಳಾದ ಕೃಷ್ಣಮೂರ್ತಿ ಚಮರಂ, ಸಿದ್ಧಸ್ವಾಮಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಇತರರು ಇದ್ದರು.