ಹುಬ್ಬಳ್ಳಿ: ಕಾನೂನು ಅಭ್ಯಾಸವು ಆಡಳಿತಾತ್ಮಕ ಅಧ್ಯಯನಕ್ಕಿಂತ ಮಹತ್ವದ್ದು. ಜೀವನದುದ್ದಕ್ಕೂ ಕಲಿಕೆಯ ಜತೆಗೆ ಸಮಾಜದಲ್ಲಿ ಸಂವಿಧಾನದ ಆಶಯಗಳನ್ನು ಅನಾವರಣಗೊಳಿಸಲು ಇರುವ ಉತ್ತಮ ಅವಕಾಶವಾಗಿದೆ ಎಂದು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಯುನಿವರ್ಸಿಟಿಯ ವಿಶ್ರಾಂತ ಕುಲಪತಿ ಡಾ. ಆರ್. ವೆಂಕಟರಾವ್ ಹೇಳಿದರು.
ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಶನಿವಾರ ಆಯೋಜಿಸಿದ್ದ 9ನೇ ರಾಷ್ಟ್ರ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ವ್ಯಕ್ತಿಯೂ ಒತ್ತಡಕ್ಕೊಳಗಾಗದೆ, ಸಂತೋಷ ಮತ್ತು ಉತ್ಸುಕತೆಯಿಂದ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಟ್ಟಲ್ಲಿ ಅದು ಅವನು ಸಮಾಜಕ್ಕೆ ನೀಡುವ ಗೌರವವಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪೊ›. ಡಾ. ಸಿ. ಬಸವರಾಜು ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದಲ್ಲಿ ಪ್ರಾಮಾಣಿಕತೆ, ನಿಷ್ಠೆ, ಪರಿಶ್ರಮ, ನಂಬಿಕೆ ಮತ್ತು ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳಿಂದ ಪ್ರಗತಿಪರ ಸಮಾಜ ನಿರ್ವಿುಸಲು ಸಾಧ್ಯ ಎಂದರು.
ಕಾನೂನು ಶಾಲೆಯ ಡೀನ್ ಡಾ. ಜಿ. ಬಿ. ಪಾಟೀಲ ಸ್ವಾಗತಿಸಿದರು. ಡಾ. ರತ್ನಾ ಭರಮಗೌಡರ್, ಡಾ. ಸಿ. ಎಸ್. ಪಾಟೀಲ, ಡಾ. ಸುನೀಲ ಬಗಾಡೆ, ಡಾ. ಅರ್ಚನಾ. ಕೆ., ಡಾ. ಭೀಮಾಬಾಯಿ ಎಸ್., ಇತರರು ಇದ್ದರು. ಕಾನೂನು ವಿದ್ಯಾರ್ಥಿ ಕೇದಾರ ಪ್ರಾರ್ಥಿಸಿದರು. ರೋಶ್ವಿತಾ ಶೆಟ್ಟಿ ನಿರೂಪಿಸಿದರು. ಕುಲಸಚಿವೆ ಅನುರಾಧ ವಸ್ತ್ರದ ವಂದಿಸಿದರು.